ADVERTISEMENT

ವೀರಶೈವರು ಹಿಂದೂಗಳಲ್ಲ: ತಿಪ್ಪಣ್ಣ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಚಿತ್ರದುರ್ಗ: ವೀರಶೈವರು ಹಿಂದೂಗಳಲ್ಲ. ಹಿಂದೂ ಧರ್ಮದ ಹಲವಾರು ಪೈಶಾಚಿಕ ಆಚರಣೆಗಳನ್ನು ವೀರಶೈವ ಧರ್ಮ ವಿರೋಧಿಸುತ್ತಾ ಬಂದಿದೆ. ಹಾಗಾಗಿ, ವೀರಶೈವ ಧರ್ಮ, ಹಿಂದೂ ಧರ್ಮ ಅಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ ಪ್ರತಿಪಾದಿಸಿದರು.

ಶುಕ್ರವಾರ ನಗರದ ಮುರುಘಾ  ಮಠದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ವೀರಶೈವರು ಬೇರೆ ಮತ್ತು ಲಿಂಗಾಯತರು ಬೇರೆ ಎನ್ನುವ ಅಭಿಪ್ರಾಯ ತಪ್ಪು. ಸಂವಿಧಾನದಲ್ಲಿ ವೀರಶೈವ, ಲಿಂಗಾಯತ, ಲಿಂಗದರ ಮತ್ತು ವೀರಶೈವ ಧರ್ಮಕ್ಕೆ ಪರಿವರ್ತನೆಯಾದವರು ವೀರಶೈವರು ಎಂದಿದೆ. ಈ ಬಗ್ಗೆ ಭಿನ್ನಾಭಿಪ್ರಾಯ ಸಲ್ಲದು. ಒಳಪಂಗಡಗಳ ಭಿನ್ನಾಭಿಪ್ರಾಯ ತೊಲಗಬೇಕು ಎಂದು ಕರೆ ನೀಡಿದರು.
ವೀರಶೈವರು ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು. ಆಗ ಒಳ ಪಂಗಡಗಳ ಭೇದಭಾವ ದೂರವಾಗುತ್ತದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕೆಲವು ಉಪ ಪಂಗಡಗಳು ಸಂಘಟನೆಯಾಗುತ್ತಿವೆ. ಆದರೆ, ಲಿಂಗಾಯತರು ಎಂದಾಗ ಒಂದೇ ಎನ್ನುವಂತಾಗಬೇಕು ಎಂದರು.

ಗುರುವಿರಕ್ತರಲ್ಲಿ ಭಿನ್ನಾಭಿಪ್ರಾಯ ಇಲ್ಲ. ಆದರೆ, ಭಕ್ತರು ವಿಭಜನೆ ಮಾಡಿ ಗುರುವಿರಕ್ತರಲ್ಲಿ ಭೇದಭಾವ ಮಾಡುತ್ತಿದ್ದಾರೆ. ಇಂತಹ ಭಿನ್ನಾಭಿಪ್ರಾಯಗಳಿಂದ ಸಮಾಜ ನೋವು ಅನುಭವಿಸುತ್ತಿದೆ. ದೋಷಾರೋಪಗಳನ್ನು ಬಿಟ್ಟು ಎಲ್ಲರೂ ಒಂದೇ ಎಂದು ಒಗ್ಗಟ್ಟಾಗಿ ಹೋರಾಟ ಮಾಡಲು ನಿರ್ಧಾರ ಕೈಗೊಳ್ಳಬೇಕು ಎಂದು ನುಡಿದರು.

ಜಾತಿಗೊಬ್ಬ ಸ್ವಾಮಿ: ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಜಾತಿಗೊಬ್ಬ ಸ್ವಾಮಿಯನ್ನು ಮಾಡಿರುವುದು ನಮಗೆ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಅವರೇ ಮುಂದಾಳತ್ವ ವಹಿಸಿ ವೀರಶೈವ ಸಮುದಾಯದ ಒಳಪಂಗಡಗಳನ್ನು ಒಗ್ಗೂಡಿಸಲಿ ಎಂದು ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಮೂರ್ತಿ ಮುರುಘಾ ಶರಣರು, ತಾವು ಯಾವುದೇ ಜನಾಂಗ ತಿರಸ್ಕರಿಸಿಲ್ಲ. ವೀರಶೈವ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕು. ಸ್ವತಂತ್ರ ಧರ್ಮದ ಅಸ್ತಿತ್ವ ಪಡೆದುಕೊಳ್ಳಲು ದೆಹಲಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಸೌಲಭ್ಯಕ್ಕಾಗಿ ಒಳಪಂಗಡಗಳು ಇರಲಿ. ಆದರೆ, ಸಾಮೂಹಿಕವಾಗಿ ಮತ್ತು ಸಾಮಾಜಿಕವಾಗಿ ಒಂದಾಗಿರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.