ADVERTISEMENT

ಶಾಸಕ ಪುಟ್ಟರಾಜು ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:20 IST
Last Updated 20 ಜನವರಿ 2011, 19:20 IST

ಮದ್ದೂರು: ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಬಂಧಿಸಲು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸಮೀಪದ ಗೆಜ್ಜಲಗೆರೆ ಬಳಿ ಗುರುವಾರ ಹೆದ್ದಾರಿ ತಡೆ ನಡೆಸಿದರು.

ಎರಡು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ಅಲ್ಲಿಂದ ಮೆರವಣಿಗೆ ಮೂಲಕ ಪಟ್ಟಣದ ತಾಲ್ಲೂಕು ಕಚೇರಿ ಆವರಣಕ್ಕೆ ಅಗಮಿಸಿದ ರೈತ ಕಾರ್ಯಕರ್ತರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು. ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು ಮಾತನಾಡಿ, ಪಾಂಡವಪುರ ತಾಲ್ಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡುವ ಮೂಲಕ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ಶಾಸಕ ಸಿ.ಎಸ್.ಪುಟ್ಟರಾಜು, ತಮ್ಮ ಗೂಂಡಾ ಬೆಂಬಲಿಗರ ಮೂಲಕ ತಾಲ್ಲೂಕಿನಲ್ಲಿ ಅಶಾಂತಿ ಹಾಗೂ ಗಲಭೆಗೆ ಕಾರಣವಾಗಿದ್ದಾರೆ.

ಕೆಆರ್‌ಎಸ್ ಬಳಿ  ತಮ್ಮ ಬೆಂಬಲಿಗರಿಂದ ಸ್ಫೋಟಕಗಳನ್ನು ಬಳಸಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದು, ರೈತರ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆಗೂ ಅಪಾಯ ತಂದೊಡ್ಡಿದ್ದಾರೆ ಎಂದು ದೂರಿದರು.

ಗೆಜ್ಜಲಗೆರೆ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರಚಾರ್, ಜಿಲ್ಲಾ ಕಾರ್ಯದರ್ಶಿ ಕೆ.ಜಿ.ಉಮೇಶ್, ತಾಲ್ಲೂಕು ಅಧ್ಯಕ್ಷ ಸೀತಾರಾಮು, ಮುಖಂಡರಾದ ಜಿ.ಎ.ಶಂಕರ್, ಜಿ.ಸತೀಶ್, ಎಸ್.ಎಂ.ಸಿದ್ದೇಗೌಡ, ಮೂಡ್ಯ ಚನ್ನೇಗೌಡ, ಕೆ.ಎಂ.ನಂಜೇಗೌಡ, ಕೀಳಘಟ್ಟ ಅಶೋಕ್, ಕುದುರುಗುಂಡಿ ನಾಗರಾಜು, ಎಂ.ಗಣೇಶ್, ಕೊಪ್ಪ ನಾಗರಾಜು, ಹುರುಗಲವಾಡಿ ಉಮೇಶ್, ಬಿ.ಜೆ.ರಮೇಶ್, ಚನ್ನಪ್ಪ, ಚಂದ್ರು, ತೊರೆಶೆಟ್ಟಹಳ್ಳಿ ಸತೀಶ್, ಜಗದೀಶ್, ಆನಂದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.