ADVERTISEMENT

ಸಂಕ್ರಾಂತಿ: ಜನರಿಂದ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಚಿತ್ರದುರ್ಗ: ಮಕರ ಸಂಕ್ರಾಂತಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ಮಾರುಕಟ್ಟೆಗಳಲ್ಲಿ ಕಬ್ಬು, ಎಳ್ಳು, ಬೆಲ್ಲ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಸಾರ್ವಜನಿಕರು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಬ್ಬನ್ನು ಸಂಕ್ರಾಂತಿ ಹಬ್ಬದಲ್ಲಿ ಹೆಚ್ಚು ಬಳಕೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಕಬ್ಬಿಗೆ ಬೇಡಿಕೆ ಇತ್ತು. ವ್ಯಾಪಾರಸ್ಥರು 1 ಕಬ್ಬಿನ ಜಲ್ಲೆಗೆ ರೂ. 25ರವರೆಗೆ ಮಾರಾಟ ಮಾಡಿದರು. ಸಂತೇಹೊಂಡ ರಸ್ತೆ, ಹೊಳಲ್ಕೆರೆ ರಸ್ತೆ, ಸರ್ಕಾರಿ ಬಾಲಕರ ಪದವಿಪೂರ್ವ ಸಮೀಪದಲ್ಲಿ ಕಬ್ಬು ಇಟ್ಟು ವ್ಯಾಪರಸ್ಥರು ಭರ್ಜರಿ ವ್ಯಾಪಾರ ನಡೆಸಿದರು. 

ಸಂಕ್ರಾಂತಿ ಹಬ್ಬವನ್ನು ಕೆಲವರು ಶನಿವಾರವೇ ಆಚರಿಸಿದರೆ, ಮತ್ತೆ ಕೆಲವರು ಜ.15ರಂದು ಹಬ್ಬದ ಸಿದ್ಧತೆ ತೊಡಗಿದ್ದರು. ಕೊರೆವ ಚಳಿಯಲ್ಲಿಯೇ ಮಹಿಳೆಯರು ಮತ್ತು ಯುವತಿಯರು ತಮ್ಮ ಮನೆಯ ಬಾಗಿಲ ಆವರಣದಲ್ಲಿ ಸುಂದರವಾದ ಬಗೆ ಬಗೆಯ ರಂಗು ರಂಗಿನ ರಂಗೋಲಿ ಹಾಕುವಲ್ಲಿ ತಲ್ಲೆನರಾಗಿದ್ದರು. ಕೆಲ ಮಹಿಳೆಯರು ಮನೆ ಅಂಗಳ ಸ್ವಚ್ಛಗೊಳಿಸಿ, ಸಗಣಿಯಿಂದ ಸಾರಿಸಿ ರಂಗೋಲಿ ಹಾಕಿದರು.

ಮನೆಗಳಲ್ಲಿ ಸಿಹಿ ತಿನಿಸುಗಳನ್ನು ಮಾಡಿ ಊಟ ಸವಿದು, ನೆರೆಹೊರೆಯವರಿಗೆ ಹಾಗೂ ಬಂಧುಗಳಿಗೆ ಎಳ್ಳು-ಬೆಲ್ಲ-ಕಬ್ಬು ನೀಡಿ ಶುಭಾಶಯ ಕೋರಿದರು.

ಸಂಕ್ರಾಂತಿ ಅಂಗವಾಗಿ ನಗರ ಹೊರವಲಯದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಯಿತು.

ದೇವಸ್ಥಾನ ಮುಂದಿನ ಆವರಣದಲ್ಲಿ ಸಾರ್ವಜನಿಕರು ದೀಪಗಳನ್ನು ಭಕ್ತಿಯಿಂದ ಹಚ್ಚಿದರು.
15ರಂದು ಮುಂಜಾನೆ ವಿಶೇಷ ಪೂಜೆ ಕೈಗೊಳ್ಳಲು ನಗರದ ನೀಲಕಂಠೇಶ್ವರಸ್ವಾಮಿ, ಬರಗೇರಮ್ಮ, ಬನಶಂಕರಿ, ಗೌಚಂದ್ರ ಮಾರಮ್ಮ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಅಗತ್ಯ ಸಿದ್ಧತೆ ಮಾಡಲಾಗುತ್ತಿತ್ತು.

ದೊಡ್ಡಪೇಟೆಯ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಲ್ಲಿ ಸಂಕ್ರಾಂತಿ ಅಂಗವಾಗಿ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.