ADVERTISEMENT

ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 18:50 IST
Last Updated 14 ಮಾರ್ಚ್ 2011, 18:50 IST

ಯಾದಗಿರಿ: ಕಬ್ಬು ಬೆಳೆಗಾರರಿಗೆ ತೊಂದರೆ ನೀಡುತ್ತಿರುವ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶಹಾಪುರ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿರುವ ಕೋರ್‌ಗ್ರೀನ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ತಮ್ಮ ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆದ ಕಬ್ಬನ್ನು ತೆಗೆದುಕೊಳ್ಳದೇ ನೆರೆಯ ಜಿಲ್ಲೆ ಹಾಗೂ ರಾಜ್ಯಗಳಿಂದ ಕಬ್ಬನ್ನು ತಂದು ಅರೆಯುತ್ತಿದ್ದಾರೆ ಎಂದು ದೂರಿದರು.

ಇದರಿಂದ ಕಬ್ಬು ಬೆಳೆದ ರೈತರ ಕಬ್ಬು 18 ತಿಂಗಳು ಕಳೆದರೂ ಹೊಲದಲ್ಲೇ ಉಳಿಯುವಂತಾಗಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಬ್ಯಾಂಕ್ ಸಾಲ ತೀರಿಸಲಾಗದ ಸ್ಥಿತಿಯಲ್ಲಿದ್ದಾರೆ. ಇದೀಗ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವಂತಾಗಿರುವ ರೈತರು, ಆತ್ಮಹತ್ಯೆಗೆ ಶರಣಾಗುವ ನಿರ್ಧಾರ ಕೈಗೊಳ್ಳುವಂತಾಗಿದೆ ಎಂದು ದೂರಿದರು.

ರೈತರಿಗೆ ಆಗುತ್ತಿರುವ ಅನ್ಯಾಯದ ಕುರಿತು ಜಿಲ್ಲಾಡಳಿತ ಅಧಿಕಾರಿಗಳು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಆದರೆ ಸಕ್ಕರೆ ಕಾರ್ಖಾನೆಯವರು ಸರ್ಕಾರ ಹಾಗೂ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ವಂಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆಯ ಕಬ್ಬು ಬೆಳೆಗಾರರ ಸಂಘದ ಸಂಯೋಜಕ ಶರಣಗೌಡ ಪೊಲೀಸಪಾಟೀಲ, ಶರಣಗೌಡ ಪಾಟೀಲ, ಸಿದ್ಧಣ್ಣಗೌಡ ಮಾರಡಗಿ, ಸಾಹೇಬರಡ್ಡಿ ದೇಶಪಾಂಡೆ, ಶಾಂತಗೌಡ ಹಮ್ಮೋಜಿ, ಮೆಹಬೂಬ ಪಟೇಲ್, ಅಮೀನರೆಡ್ಡಿಗೌಡ ತಳಕ, ತುಕ್ಕು ನಾಯಕ, ಸಿದ್ದಲಿಂಗರೆಡ್ಡಿ ಮಾರಡಗಿ, ಮಾರ್ತಾಂಡಪ್ಪ ಪೂಜಾರಿ, ಚಂದ್ರಪ್ಪ ಪೂಜಾರಿ ಮುಂತಾದವರು ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.