ADVERTISEMENT

ಸಮಾಜ ಉದ್ಧಾರ ಸ್ವಾಮೀಜಿಗಳ ಕರ್ತವ್ಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ಚನ್ನರಾಯಪಟ್ಟಣ: `ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಠಾಧೀಶರ ಜವಾಬ್ದಾರಿ ಹೆಚ್ಚಿದ್ದು, ಅವರು ಸರ್ವಧರ್ಮ ಸಮನ್ವಯ ಸಾಧಿಸಿ ಜನರ ಏಳಿಗೆಗೆ ದುಡಿಯಬೇಕು~ ಎಂದು ಶ್ರವಣಬೆಳಗೊಳದ ಮಠಾಧೀಶ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ಜಿಲ್ಲೆ ಹೊಂಬುಜ ಜೈನಮಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಧರ್ಮಕೀರ್ತಿ ಸ್ವಾಮೀಜಿ ಅವರಿಗೆ ಶ್ರವಣಬೆಳಗೊಳದ  ಚಾವುಂಡರಾಯ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಮಠಗಳು ಸ್ವಾಮೀಜಿಗಳ ವಾಸ ಸ್ಥಾನವಲ್ಲ. ಬದಲಾಗುತ್ತಿರುವ ಕಾಲಕ್ಕೆ ಅನುಸಾರವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಾಜ  ಉದ್ಧಾರ ಮಾಡಬೇಕಿದೆ. ಸ್ವಾರ್ಥ ತ್ಯಜಿಸಿ ಲೋಕಕಲ್ಯಾಣ ಸಾಧಿಸಬೇಕು ಎಂದರು.

ಹೊಂಬುಜ ಮಠಕ್ಕೆ ಉತ್ತರಾಧಿಕಾಯಾಗಿ ನೇಮಕವಾಗಿರುವ ಧರ್ಮಕೀರ್ತಿ ಸ್ವಾಮೀಜಿ, ಸದ್ಯದಲ್ಲಿ ದೆಹಲಿಗೆ ತೆರಳಿ ವಿದ್ಯಾನಂದಸಾಗರ ಮಹಾರಾಜರನ್ನು ಭೇಟಿಯಾಗಲಿದ್ದಾರೆ. ನಂತರ 14ಕ್ಕೆ ಹೊಂಬುಜ ಮಠಕ್ಕೆ ಪುರ ಪ್ರವೇಶ ಮಾಡುವರು, 17ಕ್ಕೆ ಪಟ್ಟಾಭಿಷೇಕ ಮಹೋತ್ಸವ ಜರುಗಲಿದೆ ಎಂದು ತಿಳಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಮಾತನಾಡಿ, 2006ರಲ್ಲಿ  ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ವೇಳೆ ಹಾಸನದಿಂದ ಶ್ರವಣಬೆಳಗೊಳಕ್ಕೆ ರೈಲು ಸೌಲಭ್ಯ ಕಲ್ಪಿಸಲಾಯಿತು.
ಶ್ರವಣಬೆಳಗೊಳದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಲೋಕೇಶ್, ತ್ಯಾಗಿಗಳು, ಆರ್ಯಿಕಾ  ಮಾತಾಜಿಗಳು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.