ADVERTISEMENT

ಸಹಕಾರ ಸಂಘ ಬಲವಾದಲ್ಲಿ ಗ್ರಾಮೀಣಾಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 7:00 IST
Last Updated 7 ಫೆಬ್ರುವರಿ 2011, 7:00 IST

ಶಿವಮೊಗ್ಗ: ಸಹಕಾರ ಸಂಘಗಳು ಬಲಗೊಂಡಾಗ ಮಾತ್ರ ಗ್ರಾಮೀಣ ಬದುಕಿನ ಸಮಗ್ರ ಅಭಿವೃದ್ಧಿ ಜತೆಗೆ ಆರ್ಥಿಕಾಭಿವೃದ್ಧಿ ಸಾಧ್ಯ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಬಿ. ಬೀರನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಸುವರ್ಣ ಮಹೋತ್ಸವ ಸವಿ ನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಸುವರ್ಣ ಸಹಕಾರ ಭವನಕ್ಕೆ ಭಾನುವಾರ ಶಿಲಾನ್ಯಾಸ ನೇರವೇರಿಸಿ ಅವರು ಮಾತನಾಡಿದರು.

ಸಹಕಾರಿ ಸಂಘಗಳು ಇರುವುದೇ ರೈತರಿಗಾಗಿ. ಈ ಹಿನ್ನೆಲೆಯಲ್ಲಿ ರೈತರು ವಾಣಿಜ್ಯ ಬ್ಯಾಂಕುಗಳತ್ತ ಮುಖ ಮಾಡದೇ ಸಹಕಾರಿ ಸಂಘಗಳ ಮೂಲಕ ವ್ಯವಹಾರ ನಡೆಸಿ, ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ಪ್ರಾಥಮಿಕ ಸಹಕಾರ ಸಂಸ್ಥೆಯೊಂದು 50 ವರ್ಷ ಪೂರೈಸಿರುವುದು ಹೆಮ್ಮೆಯ ವಿಷಯ. ಅದರಲ್ಲೂ ಬಿ. ಬೀರನಹಳ್ಳಿ ಸಹಕಾರಿ ಸಂಸ್ಥೆ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಹಾಗೂ ಮಾದರಿ ಸಂಸ್ಥೆಯಾಗಿದ್ದು, ್ಙ ನಾಲ್ಕೂವರೆ ಕೋಟಿಗೂ ಅಧಿಕ ಸಾಲವನ್ನು ರೈತಾಪಿ ವರ್ಗಕ್ಕೆ ನೀಡುವ ಮೂಲಕ ಗಣನೀಯ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬರುವ ಏಪ್ರಿಲ್ 1ರಿಂದ ಶೇ. 1ರ ಬಡ್ಡಿ ದರದಲ್ಲಿ ಸಾಲದ ನೆರವು ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಹೇಳಿದರು. ಸುವರ್ಣ ಮಹೋತ್ಸವದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ, ಗ್ರಾಮೀಣ ಭಾಗದ ಜನರಿಗೆ ಸಹಕಾರಿ ಸಂಸ್ಥೆ ಅತಿ ಹತ್ತಿರವಿರುವ ಹಣಕಾಸಿನ ಸಂಸ್ಥೆಯಾಗಿದ್ದು, ಸಹಕಾರಿ ಸಂಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಆಡಳಿತ ನಡೆಸಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ. ದುಗ್ಗಪ್ಪಗೌಡ, ರಾಜ್ಯ ರೈತ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ, ಸಹಕಾರ ಸಂಘಗಳ ಸಹಾಯಕ ವ್ಯವಸ್ಥಾಪಕ ಎ.ಎಸ್. ಜಯಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಸಿ. ಬಸವರಾಜಪ್ಪ, ಬಿ. ಬೀರನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಹಾಲಮ್ಮ, ಶೆಟ್ಟಿಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶೋಭಾ ಮತ್ತಿತರರು ಉಪಸ್ಥಿತರಿದ್ದರು. ಗಡ್ಲ ಬಸಪ್ಪ ಸ್ವಾಗತಿಸಿದರು. ಶಾಂತಾ ಆನಂದ್ ಹಾಗೂ ದೇವಕುಮಾರ್ ಕಾರ್ಯಕ್ರಮ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.