ADVERTISEMENT

20 ಲಕ್ಷ ಮೌಲ್ಯದ ನಗ ಲೂಟಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗೌಡಗೆರೆ ಗ್ರಾಮದ ತೋಟದ ಮನೆಯ ಬಾಗಿಲನ್ನು ಕಬ್ಬಿಣದ ಸಲಾಕೆಯಿದ ಮೀಟಿ ಒಳ ನುಗ್ಗಿದ 8 ಮಂದಿ ತಂಡ ಮನೆಯ ಮಾಲೀಕರನ್ನು ಥಳಿಸಿ 20 ಲಕ್ಷ ರೂಪಾಯಿ ಮೌಲ್ಯದ ನಗ ಹಾಗೂ ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಗ್ರಾಮದ ಕೇಶವ, ಲತಾ ದಂಪತಿ ಮನೆಯಲ್ಲಿ ಈ ಡಕಾಯಿತಿ ನಡೆದಿದೆ. ಮುಂಜಾನೆ 2.30ರಲ್ಲಿ ಮೇಲಂತಸ್ತಿನ ಮನೆಯ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳನುಗ್ಗಿರುವ ಕಳ್ಳರು ಮಹಡಿಯಿಂದ ನೆಲ ಅಂತಸ್ತಿನ ಮನೆಗೆ ಬಂದರು. ಭಾನುವಾರ ಕೊಬ್ಬರಿ ಸುಲಿಯಲು ಬಂದು ಅಲ್ಲೆ ಮಲಗಿದ್ದ ರವಿ ಎಂಬಾತನನ್ನು ಥಳಿಸಿ ಶೌಚಾಲಯದ ಕೊಠಡಿಯಲ್ಲಿ ಕೂಡಿ ಹಾಕಿದರು.

ನಂತರ ಮನೆಯ ಕೆಲಸದ ಹುಡುಗಿ ರುಚಿತಳ ಬಾಯಿ ಮುಚ್ಚಲು ಯತ್ನಿಸಿದರು. ಅಷ್ಟರಲ್ಲಿ ಆಕೆ ಜೋರಾಗಿ ಕೂಗಿಕೊಂಡಳು. ಪಕ್ಕದ ಕೊಠಡಿಯಲ್ಲಿ  ಮಲಗಿದ್ದ ದಂಪತಿ, ಕೆಲಸದಾಕೆಯ ಚೀರಾಟ ಕೇಳಿ ಬಾಗಿಲು ತೆರೆದು ನೋಡುವಷ್ಟರಲ್ಲಿ ಡಕಾಯಿತರು ಲತಾ ಅವರನ್ನು ಕೊಠಡಿಗೆ ಎಳೆದೊಯ್ದರು. 

ಪತಿ ಕೇಶವ, ರಕ್ಷಣೆಗಾಗಿ ಗೋಡೆಯಲ್ಲಿದ್ದ ಬಂದೂಕನ್ನು ಎತ್ತಿಕೊಳ್ಳಲು ಮುಂದಾದಾಗ ಅವರ ಮೇಲೆ ಕಳ್ಳರು ಹಲ್ಲೆ ಮಾಡಿದರು. ಅವರ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು ಶೌಚಾಲಯಕ್ಕೆ ಎಸೆದರು. ಲತಾ ಅವರನ್ನು ಕೊಲ್ಲುವುದಾಗಿ ಕುತ್ತಿಗೆಗೆ ಚಾಕು ಹಿಡಿದು ಹೆದರಿಸಿ, ಮಾಂಗಲ್ಯ ಸರ ಕಿತ್ತುಕೊಂಡರು. ಪ್ರತಿರೋಧ ವ್ಯಕ್ತಪಡಿಸುವಾಗ ಎಡಗೈಗೆ ಚಾಕುವಿನಿಂದ ತಿವಿದು ಗಾಯಗೊಳಿಸಿದ್ದಾರೆ.

ಚಾಕು ತೋರಿಸಿ ಚಿನ್ನ ಮತ್ತು ಹಣವನ್ನು ಪಡೆದುಕೊಂಡರು. ಎಂಟು ಮಂದಿಯಲ್ಲಿ ಇಬ್ಬರು ಹೊರಗೆ ಇದ್ದರೆ, ಆರು ಮಂದಿ ಮನೆ ಒಳಗಿದ್ದರು. ಒಂದಿಬ್ಬರು ಕನ್ನಡ ಮಾತನಾಡುತ್ತಿದ್ದುದು ಬಿಟ್ಟರೆ ಉಳಿದವರು ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದರು. ಎಲ್ಲರೂ ಮುಸುಕು ಧರಿಸಿದ್ದರು. ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಿದ್ದರು.

ಮೂವರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ನಂತರ ಹಣ ಮತ್ತು ಒಡವೆಗಾಗಿ ನಾಲ್ಕು ಕೊಠಡಿಯಲ್ಲಿ ತಡಕಾಡಿದ ಯುವಕರು ಬೀರುಗಳನ್ನು ಸಲಾಕೆಯಿಂದ ಒಡೆದು ಅದರಲ್ಲಿದ್ದ 10 ಲಕ್ಷ ರೂಪಾಯಿ ನಗದು, ಮತ್ತೊಂದು ಬೀರುವಿನಲ್ಲಿದ್ದ 352 ಗ್ರಾಂ ಚಿನ್ನದ ಒಡವೆ, ಒಂದೂಕಾಲು ಕೆ.ಜಿ. ಬೆಳ್ಳಿಯ ಆಭರಣ ದೋಚಿಕೊಂಡು ಹೋಗಿದ್ದಾರೆ. ಮನೆಯವರನ್ನು ಮತ್ತೊಂದು ಕೊಠಡಿಯಲ್ಲಿ ಕೂಡಿ ಬೀಗ ಹಾಕಿ, ಬಂದೂಕನ್ನು ಮನೆಯ ಹೊರಗೆ ಇಟ್ಟು ಪರಾರಿಯಾಗಿದ್ದಾರೆ.

ಬೆಳಿಗ್ಗೆ ಮನೆ ಬಳಿ ಬಂದ ಹಾಲು ಕರೆಯುವ ಯುವಕನನ್ನು ಕಿಟಿಕಿಯಿಂದ ಕೂಗಿ ಕರೆದಾಗ ಆತ ಬಂದು ಬೀಗ ತೆರೆದಿದ್ದಾನೆ. ಸ್ಥಳಕ್ಕೆ ಎಎಸ್ಪಿ ವಿ.ಬಿ. ಕಿತ್ತಲಿ, ಡಿವೈಎಸ್‌ಪಿ ಕೆ. ಪರಶುರಾಮ ಭೇಟಿ ನೀಡಿದ್ದರು. ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.