ADVERTISEMENT

26ಕ್ಕೆ ಮಠಾಧೀಶರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ಮೈಸೂರು: ರಾಜ್ಯದ ವಿವಿಧ ಕಡೆ ಆಚರಣೆಯಲ್ಲಿರುವ ಮಡೆಸ್ನಾನ, ಪಂಕ್ತಿಭೇದಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಮಾ. 26 ರಂದು  ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಠಾಧೀಶರ ಸಮಾವೇಶ ಹಾಗೂ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಡುಮಾಮಿಡಿ ಮಠ ಹಾಗೂ ಮಾನವಧರ್ಮ ಪೀಠದ ಆಶ್ರಯದಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಗದಗದ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಂಬಿಗರ ಚೌಡಯ್ಯ ಗುರುಪೀಠದ ಶಾಂತಮುನಿ ಸ್ವಾಮೀಜಿ, ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಸೇರಿದಂತೆ 136 ಮಠಾಧೀಶರು, ಪ್ರಗತಿಪರ ಚಿಂತಕರು ಭಾಗವಹಿಸಲಿದ್ದು, ವೀರಭದ್ರ ಚನ್ನಮಲ್ಲ ಸ್ವಾಮೀಜಿ  ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

`ಮಡೆಸ್ನಾನ ಮತ್ತು ಪಂಕ್ತಿಭೇದ~ ಎಂಬ ಕೃತಿ ಬಿಡುಗಡೆ ಮಾಡಲಾಗುತ್ತದೆ. ಧರಣಿಯಲ್ಲಿ ಸಾಹಿತಿ ಕೋ.ಚನ್ನಬಸಪ್ಪ, ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್, ಡಾ.ಜಿ.ರಾಮಕೃಷ್ಣ, ಡಾ.ಕೆ. ಮರುಳಸಿದ್ದಪ್ಪ, ಪ್ರೊ.ಜಿ.ಕೆ.ಗೋವಿಂದರಾವ್  ಪಾಲ್ಗೊಳ್ಳುವರು. ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ನಿಷೇಧಿಸಿದಂತೆ ಬಾನಾಮತಿ, ಮಡೆಸ್ನಾನ, ಪಂಕ್ತಿಭೇದ, ಪ್ರಾಣಿಬಲಿ, ಸಿಡಿ ಉತ್ಸವಗಳನ್ನು ನಿಷೇಧಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.