ADVERTISEMENT

ಏತ ನೀರಾವರಿಗೆ ವಿದ್ಯುತ್ ಒದಗಿಸಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 5:50 IST
Last Updated 2 ಅಕ್ಟೋಬರ್ 2012, 5:50 IST

ಆಲಮಟ್ಟಿ: ಔದ್ಯೋಗಿಕ ಕ್ಷೇತ್ರಕ್ಕೆ ನೀಡುತ್ತಿರುವ ವಿದ್ಯುತ್‌ನ್ನು ಕಡಿತಗೊಳಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಯ ಏತ ನೀರಾವರಿಗಳ ಮುಖ್ಯಸ್ಥಾವರಗಳಿಗೆ ನಿರಂತರ ವಿದ್ಯುತ್ ಒದಗಿಸಿ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಔದ್ಯೋಗಿಕ ರಂಗಕ್ಕೆ ನೀಡುತ್ತಿರುವ ವಿದ್ಯುತ್‌ನ್ನು ಕಡಿತಗೊಳಿಸಿ ಕೃಷಿ ಕ್ಷೇತ್ರ ಅತ್ಯಂತ ಅಗತ್ಯವಾಗಿರುವ ವಿದ್ಯುತ್‌ನ್ನು ನಿರಂತರವಾಗಿ ನೀಡಿ, ಇಲ್ಲವಾದರೇ ಆಹಾರದ ಅಭದ್ರತೆ ಹೆಚ್ಚಾಗಲಿದೆ ಎಂದರು.

ಕಳೆದ ವರ್ಷದ ಹಿಂಗಾರು ಬೆಳೆ ವಿಫಲವಾಗಿದ್ದು, ಪ್ರಸ್ತುತ ಮುಂಗಾರು ಮಳೆ ವಿಫಲವಾಗಿದ್ದರಿಂದ ಕೃಷ್ಣಾ ಕಾಲುವೆಯನ್ನೇ ರೈತರು ಹೆಚ್ಚಾಗಿ ನಂಬಿದ್ದಾರೆ, ಆದರೇ ವಿದ್ಯುತ್‌ನ ಕೊರತೆಯಿಂದ ಮುಖ್ಯ ಸ್ಥಾವರಕ್ಕೆ ವಿದ್ಯುತ್ ಸಮಸ್ಯೆ ಕಾಡುತ್ತಿದ್ದು, ಸಮರ್ಪಕವಾಗಿ ಕಾಲುವೆಗೆ ನೀರು ಹರಿಸ ಲಾಗುತ್ತಿಲ್ಲ. 

 ಈ ಮೂರು ಏತ ನೀರಾವರಿಗೆ ಪ್ರತಿ ಗಂಟೆಗೆ 6,500 ಕಿಲೋ ವ್ಯಾಟ್ ವಿದ್ಯುತ್ ದಿನದ 18 ಗಂಟೆಗಳ ಕಾಲ ನಿರಂತರ ಅಗತ್ಯವಿದೆ. ಆದರೇ ಆ ಪ್ರಮಾಣದ ವಿದ್ಯುತ್ ಈ ಸ್ಥಾವರಗಳಿಗೆ ಲಭಿಸುತ್ತಿಲ್ಲ. ಇದರಿಂದ ರೈತರಿಗೆ ತೀವ್ರ ತೊಂದರೆ ಯಾಗುತ್ತಿದೆ ಎಂದರು.

ಹೇಗಾದರೂ, ಎಲ್ಲಿಂದಾದರೂ ತಂದು ಈ ಏತ ನೀರಾವರಿಗಳಿಗೆ ವಿದ್ಯುತ್ ನೀಡಿ. ಗೃಹೋಪ ಯೋಗಿಗಳಿಗೆ ಹಾಗೂ ಔದ್ಯೋಗಿಕ ಕ್ಷೇತ್ರಕ್ಕೆ ವಿದ್ಯುತ್ ಬೇಕಾದರೆ ಕಡಿಮೆ ಮಾಡಿ ಆದರೇ ಮೊದಲು ಏತ ನೀರಾವರಿಗೆ ವಿದ್ಯುತ್ ನೀಡಿ ಎಂದು ಕುಂಬಾರ ಸರಕಾರಕ್ಕೆ ಆಗ್ರಹಿಸಿದರು. ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ನೀಡಿ ಈ ಕ್ರಮ ಕೈಗೊಳ್ಳಿ ಎಂದರು.

ಕೆಬಿಜೆಎನ್‌ಎಲ್ ಅಧಿಕಾರಿಗಳು ಕೆಪಿಟಿಸಿಎಲ್ ಅಧಿಕಾರಿಗಳ ಜೊತೆ ಚರ್ಚಿಸಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು, ಈ ಕುರಿತು ಜಲಸಂಪನ್ಮೂಲ ಸಚಿವರು ಹಾಗೂ ಇಂಧನ ಸಚಿವರು ವಿಶೇಷ ಆಸಕ್ತಿ ವಹಿಸಿ ಇನ್ನೆರೆಡು ದಿನಗಳಲ್ಲಿ ಏತ ನೀರಾವರಿಗೆ ವಿದ್ಯುತ್ ಕೊರತೆ ಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಳೆದ ಹಿಂಗಾರು ಹಂಗಾಮಿನಲ್ಲಿ ನೀರಿಲ್ಲದೇ ಬೆಳೆ ಹಾನಿಯಾಗಿದೆ, ಪ್ರಸಕ್ತ ಮುಂಗಾರು ಹಂಗಾಮಿಗೆ ಸಾಕಷ್ಟು ನೀರಿದ್ದರೂ ವಿದ್ಯುತ್‌ನ ಕೊರತೆಯಿಂದ ನೀರು ಲಭಿಸುತ್ತಿಲ್ಲ, ಇದರಿಂದ ಆಹಾರದ ಬೆಳೆಗಳು ಕೈಕೊಟ್ಟು, ಎಲ್ಲೆಡೆಯೂ ಆಹಾರದ ಅಭದ್ರತೆ, ಬೆಲೆ ಏರಿಕೆ ಉಂಟಾಗಲಿದೆ ಎಂದರು.

ಹಿಂಗಾರು ಹಂಗಾಮಿಗೆ ನೀರು ಖಾತ್ರಿ ನೀಡಿ:
ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳ ಕಾಲುವೆಗಳಿಗೆ ನೀರು ಹರಿಸುವ ಹಿಂಗಾರು ಹಂಗಾಮಿಗೆ ಈಗಲೇ ನೀರು ನೀಡುವ ಕುರಿತು ಖಾತ್ರಿ ನೀಡಿ ಎಂದ ಆಗ್ರಹಿಸಿದ ಅವರು, ಪ್ರಸಕ್ತ ವರ್ಷವೂ ನೀರಿನ ಕೊರತೆ ಉಂಟಾಗಲಿದ್ದು, ನೀರು ಲಭ್ಯತೆ ಕಡಿಮೆಯಿದ್ದರೇ ಮೊದಲೇ ರೈತರಲ್ಲಿ ಜಾಗೃತಿ ಮೂಡಿಸಿ, ವಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಿತ್ತನೆ ನಡೆಸುವ ರೈತರಿಗೆ ಮಾರ್ಚ ಅಂತ್ಯದವರೆಗೆ ನೀರು ಬೇಕಾಗುತ್ತದೆ. ಅಲ್ಲಿಯವರೆಗೆ ನೀರು ಹರಿಸಲು ಸಾಧ್ಯವೇ? ಎಂಬುದನ್ನು ಈಗಲೇ ಕೆಬಿಜೆಎನ್‌ಎಲ್ ಅಧಿಕಾರಿಗಳು, ನೀರಾವರಿ ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು.

ಅಕ್ಟೋಬರ್ ಮೊದಲ ವಾರದಲ್ಲಿಯೇ ಹಿಂಗಾರು ಹಂಗಾಮಿಗೆ ನೀರು ಹರಿಸುವ ಅವಧಿ ಯನ್ನು ನಿರ್ಧರಿಸಿ, ಆ ಅವಧಿಯಲ್ಲಿ ಬೆಳೆಯ ಬಹುದಾದ ಬೆಳೆಗಳ ಬಗ್ಗೆಯೂ ರೈತರಿಗೆ ತಿಳಿಸಿ, ಇಲ್ಲದಿದ್ದರೇ ಹೆಚ್ಚಿನ ಬೆಲೆ ಕೊಟ್ಟು ರೈತ ಖರೀದಿಸಿದ ಬಿತ್ತನೆ ಬೀಜ ಹಾನಿಯಾಗಲಿದೆ ಎಂದರು.

ಕೈಗಾರಿಕೆಗಳಿಗೆ, ಖಾಸಗಿ ಕಂಪೆನಿಗಳಿಗೆ ನೀರು ಬೇಡ: ಪ್ರಸಕ್ತ ವರ್ಷವೂ ಆಲಮಟ್ಟಿ ಜಲಾಶಯ ದಲ್ಲಿ ನೀರಿನ ಪ್ರಮಾಣ ಕುಸಿತಗೊಂಡಿದ್ದು, ಕೈಗಾರಿಕೆಗಳಿಗೆ, ಖಾಸಗಿ ಕಂಪೆನಿಗಳಿಗೆ ನೀರು ಕೊಡುವುದು ಬೇಡ.

ನಾರಾಯಣಪುರ ಜಲಾಶಯ ದಿಂದ ಅನವಶ್ಯಕವಾಗಿ ಕೆಲ ಖಾಸಗಿ ವಿದ್ಯುತ್ ಕಂಪೆನಿಗೆ ಅನಧಿಕೃತವಾಗಿ ನೀರು ಹರಿಸುವುದನ್ನು ತಡೆಯಬೇಕು, ಅಲ್ಲದೇ ಕಾಲುವೆಯ ವಾರಾಬಂಧಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಈಗಿನಿಂದಲೇ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು,  ತಪ್ಪಿದಲ್ಲಿ ಬೇಸಿಗೆಯಲ್ಲಿ ಮತ್ತೆ ನೀರಿನ ಹಾಹಾಕಾರ ಹೆಚ್ಚಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಂಚಾಲಕ ಜಿ.ಸಿ. ಮುತ್ತಲದಿನ್ನಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.