ADVERTISEMENT

ಏರುವ ಬಿಸಿಲು, ಬಿರುಸಿನ ರಾಜಕೀಯ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 6:50 IST
Last Updated 5 ಏಪ್ರಿಲ್ 2013, 6:50 IST

ಬಾದಾಮಿ: ವಿಧಾನ ಸಭೆಯ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸ್ಪರ್ಧಿಸಲು ಚುನಾವಣೆಯ ರಣತಂತ್ರವನ್ನು ಆರಂಭಿಸಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಕೆಜೆಪಿ  ಪಕ್ಷದ ಮುಖಂಡರು ತಮ್ಮ ಹೈಕಮಾಂಡ್ ಗಮನ ಸೆಳೆಯಲು ವಿವಿಧ ತಂತ್ರಗಳನ್ನು ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಪಾಳೆಯದಲ್ಲಿ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಡಾ. ದೇವರಾಜ ಪಾಟೀಲ ಮತ್ತು ಎಂ.ಬಿ. ಹಂಗರಗಿ ಪಕ್ಷದ ಟಿಕೆಟ್ ಪಡೆಯಲು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿ.ಬಿ. ಚಿಮ್ಮನಕಟ್ಟಿ  34 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿರುವುದಾಗಿ ಹೇಳಿದ್ದಾರೆ. ಈ ಬಾರಿ ತಮಗೆ ಟಿಕೆಟ್ ಕೊಡಬೇಕು ಎಂದು ಪಕ್ಷದ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ವೈದ್ಯ ಡಾ.ದೇವರಾಜ ಪಾಟೀಲ ಕಾಂಗ್ರೆಸ್ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ. ಮದ್ಯಪಾನ ಸಂಯಮ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ.ಬಿ. ಹಂಗರಗಿ ಈ ಬಾರಿ ವೀರಶೈವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಬೇಕು ಎಂದು ಪಕ್ಷದ ಹೈಕಮಾಂಡ್‌ಗೆ ಆಗ್ರಹಿಸಲು ದೆಹಲಿಗೆ ತೆರಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಟ್ಟಾ ಬೆಂಬಲಿಗ ಬಿಜೆಪಿ ಪಕ್ಷದ ಶಾಸಕ  ಎಂ.ಕೆ. ಪಟ್ಟಣಶೆಟ್ಟಿ ಬಿಜೆಪಿಯಲ್ಲಿ ಉಳಿಯಬೇಕೋ ಕೆಜೆಪಿ ಸೇರಬೇಕೋ ಎಂದು ಆರು ತಿಂಗಳಿಂದ ಗೊಂದಲದಲ್ಲಿ ಇದ್ದರು. ತಾವು ಕೆಜೆಪಿ ಸೇರುವುದಿಲ್ಲ, ಬಿಜೆಪಿಯಲ್ಲಿಯೇ ಉಳಿದು ಚುನಾವಣೆಗೆ ಸ್ಪರ್ಧಿಸುವುದಾಗಿ  ಸ್ಪಷ್ಟಪಡಿಸಿದ್ದಾರೆ.

ಗುಳೇದಗುಡ್ಡ ಮತಕ್ಷೇತ್ರದ ಮಾಜಿ ಶಾಸಕ, ಕೈಮಗ್ಗ ನಿಗಮ ಮಂಡಳಿ ಅಧ್ಯಕ್ಷ ರಾಜಶೇಖರ ಶೀಲವಂತರ ಸಹ ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. 2008ರ ಚುನಾವಣೆಯಲ್ಲಿ ರಾಜಶೇಖರ ಶೀಲವಂತರ ಅವರಿಗೆ ಟಿಕೆಟ್ ದೊರೆಯುವುದಿತ್ತು. ಕೊನೆಯ ಗಳಿಗೆಯಲ್ಲಿ ಎಂ.ಕೆ. ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ದೊರೆಯಿತು. ಮುಂಬರುವ ಚುನಾವಣೆಯಲ್ಲಿ ರಾಜಶೇಖರ್ ಶೀಲವಂತರ ಅವರಿಗೆ ಪಕ್ಷದ ಟಿಕೆಟ್ ಮೀಸಲು ಎಂದು ಆರ್‌ಎಸ್‌ಎಸ್ ಮುಖಂಡರು ಹೊಂದಾಣಿಕೆ ಮಾಡಿದ ನಂತರ  ಎಂ.ಕೆ. ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ಘೋಷಣೆಯಾಯಿತು.

2008ರಲ್ಲಿ ನಾನು ಎಂ.ಕೆ. ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ಬಿಟ್ಟುಕೊಟ್ಟಿರುವೆ. ಈ ಬಾರಿ ನಾನೂ ಟಿಕೆಟ್ ಆಕಾಂಕ್ಷಿ ಎಂದು ರಾಜಶೇಖರ್ ಶೀಲವಂತರ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ.

ಅವರು ಈಚೆಗೆ ಬಾದಾಮಿಯಲ್ಲಿ ಜರುಗಿದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಮುಖಂಡರು  ಟಿಕೆಟ್ ಕೊಟ್ಟರೆ ತಾವೂ ಸ್ಪರ್ಧಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಿಕೆಟ್ ದೊರೆಯದಿದ್ದರೂ ಯಾರಿಗೆ ಟಿಕೆಟ್ ಕೊಡುತ್ತಾರೊ ಅವರಿಗೆ ಬೆಂಬಲಿಸಿ ಬಿಜೆಪಿ ಪಕ್ಷ ಗೆಲ್ಲುವಂತೆ ಶ್ರಮಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿಯೂ ಟಿಕೆಟ್ ಹಂಚಿಕೆ ಗೊಂದಲ ಇದೆ.

ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿದ್ದ ಯುವ ಮುಖಂಡ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಮತ್ತು ಯುವ ಮುಖಂಡರು ಬಿಜೆಪಿ ತೊರೆದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ನಡೆಸಿದ್ದಾರೆ.

ಬಾದಾಮಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು  ಗೆಲ್ಲಿಸಿ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿಯಲು ಶ್ರಮಿಸಿದ ಯುವಮುಖಂಡ ಮಹಾಂತೇಶ ಮಮದಾಪೂರ ಅವರಿಗೆ ಜೆಡಿಎಸ್ ಪಕ್ಷದ ಟಿಕೆಟ್ ದೊರೆಯುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ಹಾಗೂ ಕೃಷ್ಣಾ ಕಾಡಾ ನಿಗಮದ ಮಾಜಿ ಅಧ್ಯಕ್ಷ ಬಿ.ಪಿ. ಹಳ್ಳೂರ ಹಾವೇರಿ ಸಮಾವೇಶದಲ್ಲಿ ಕೆಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿಾರೆ. ಬಿ.ಪಿ. ಹಳ್ಳೂರ ಕೆಜೆಪಿಯಿಂದ ಸ್ಪರ್ಧಿಸುವುದು ಖಚಿತ ಎಂದು ತಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.