ADVERTISEMENT

ಒಂದೇ ಶೌಚಾಲಯಕ್ಕೆ ಎರಡು ಬಿಲ್!

ಕಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಂಕಣಕೊಪ್ಪದಲ್ಲಿ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 7:10 IST
Last Updated 3 ಆಗಸ್ಟ್ 2013, 7:10 IST

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೊಂಕಣಕೊಪ್ಪ ಗ್ರಾಮದಲ್ಲಿ ಪಂಚಾಯ್ತಿ ಸದಸ್ಯರು ಹಾಗೂ ಪಿಡಿಒ ಸೇರಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆಂದು ಕೊಂಕಣಕೊಪ್ಪ ಗ್ರಾಮದ ಶಿವಾನಂದ ಗಾಣಿಗೇರ ಹಾಗೂ ಸಾಮಾಜಿಕ ಹೋರಾಟಗಾರ ಹಣಮಂತ ಯರಗೊಪ್ಪ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಂಕಣಕೊಪ್ಪ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ಹಾಗೂ ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಭಾರಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಸದಸ್ಯರು ತಮ್ಮ ಸಂಬಂಧಿಕರಿಗೆ ಹಾಗೂ ದುಡ್ಡು ಕೊಟ್ಟವರಿಗೆ ವಸತಿ ಯೋಜನೆಯಡಿ ಮನೆಗಳನ್ನು ನೀಡಲು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಯಾವುದೇ ಗ್ರಾಮ ಸಭೆಯನ್ನು ನಡೆಸಿಲ್ಲ, ರೂ10 ಸಾವಿರ, ರೂ5 ಸಾವಿರ ಹಣ ಕೊಟ್ಟವರಿಗೆ ಶೀಘ್ರ ಮನೆ ನೀಡಲಾಗುವುದು. ರೂ 3 ಸಾವಿರ ಕೊಟ್ಟರೆ ಮುಂದಿನ ವರ್ಷ ಮನೆ ಹಾಕಿಕೊಡುತ್ತೇವೆ ಎಂದು ಸದಸ್ಯರು ಹಣ ವಸೂಲಿ ಮಾಡಿದ್ದಾರೆಂದು ತಿಳಿಸಿದರು.

ಬಸವ ವಸತಿ ಆಶ್ರಯ ಮನೆ, ಜವಳಿ ಇಲಾಖೆಯ ಮನೆಗಳನ್ನು ಸರ್ಕಾರಿ ನೌಕರರಿಗೆ ಹಂಚಿದ್ದಲ್ಲದೇ ಶ್ರಿಮಂತರಿಗೂ ಹಂಚಿಕೆ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯರ ಕುಟುಂಬಕ್ಕೆ ಹಂಚಿಕೆ ಮಾಡಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಒಂದೇ ಶೌಚಾಲಯ ಕಟ್ಟಡಕ್ಕೆ ಇಬ್ಬರ ಹೆಸರಿನಲ್ಲಿ ಹಣ ಪಡೆದು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಎಲ್ಲ ಅವ್ಯವಹಾರ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿಇಒ ಅವರ ಗಮನಕ್ಕೆ ತರಲಾಗಿದೆ ಎಂದರು.

ಕೊಂಕಣಕೊಪ್ಪ ಗ್ರಾಮದ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಗೆ ತಡೆಗೋಡೆ ನಿರ್ಮಾಣ ಮಾಡಲು ರೂ 70 ಸಾವಿರ ಖರ್ಚಾದರೆ ರೂ5 ಲಕ್ಷ ಖರ್ಚಾಗಿದೆ ಎಂದು ಬಿಲ್ ತೆಗೆದುಕೊಳ್ಳಲಾಗಿದೆ. ಕೆರೆ ನಿರ್ಮಾಣ ಕಾಮಗಾರಿಗೆ ರೂ 1ಲಕ್ಷ ವ್ಯಯ ಮಾಡಿದರೆ ಸುಮಾರು ರೂ5 ಲಕ್ಷ ಬಿಲ್ ಪಡೆದುಕೊಂಡಿದ್ದಾರೆ. ಒಂದೇ ಕಾಮಗಾರಿಗೆ ಎರಡು ಹೆಸರು ಸೇರಿಸಿ ಪ್ರತ್ಯೇಕ ಬಿಲ್ ಪಡೆಯುವ ಮೂಲಕ ಉದ್ಯೋಗ ಖಾತ್ರಿಯಡಿ ಸಾಕಷ್ಟು ಅವ್ಯವಹಾರವನ್ನು ಸದಸ್ಯರು ಮಾಡಿದ್ದು ಇದಕ್ಕೆ ಪಿಡಿಒ ಸಾಥ್ ನೀಡಿದ್ದಾರೆಂದು ದೂರಿದರು.

ಮಾಹಿತಿ ಹಕ್ಕಿನ ಪ್ರಕಾರ ಪಂಚಾಯ್ತಿಗೆ ಕೇಳಲು ಹೋದರೆ ಗ್ರಾಮದಲ್ಲಿ ಸದಸ್ಯರು ಬೆದರಿಕೆ ಹಾಕುತ್ತಾರೆ. ಪಂಚಾಯ್ತಿಯಲ್ಲಿ ಕೂಡಿ ಹಾಕಿದ ಘಟನೆಯೂ ನಡೆದಿದೆ ಎಂದು ಶಿವಾನಂದ ಗಾಣಿಗೇರ ತಿಳಿಸಿದರು.

ಬಡವರಿಗೆ ಅನ್ಯಾಯ ಮಾಡುತ್ತಿರುವ ಸದಸ್ಯರು ಹಾಗೂ ಅಧಿಕಾರಿಗಳಿಂದ ಮರಳಿ ಹಣ ವಾಪಸ್ ಪಡೆದುಕೊಂಡು ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಭವನದ ಮುಂದೆ ಉಪವಾಸ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.