ADVERTISEMENT

ಒತ್ತಡದ ಕಲಿಕೆ ಬೇಡ: ಬಿಇಒ ಒಡೆಯರ

​ಪ್ರಜಾವಾಣಿ ವಾರ್ತೆ
Published 26 ಮೇ 2012, 9:35 IST
Last Updated 26 ಮೇ 2012, 9:35 IST

ಹುನಗುಂದ: ಇಂದು ಸಮಾಜ ಇಲ್ಲದ ಭ್ರಮೆಯಲ್ಲಿ ತೇಲುತ್ತಿದೆ. ನಿತ್ಯ ಮಕ್ಕಳನ್ನು ಒತ್ತಡದಲ್ಲಿರಿಸುತ್ತಿದೆ.  ಕಲಿಕೆ ಎಂದರೆ ಕೇವಲ ಅಂಕ ಪಡೆಯುವುದಲ್ಲ. ಮಕ್ಕಳು ಸರ್ವತೋಮುಖ ಉನ್ನತಿ ಸಾಧಿಸುವ ಹಾಗೂ ಉತ್ತಮ ನಾಗರಿಕರಾಗುವ ಚಟುವಟಿಕೆಗಳನ್ನು ಶಿಕ್ಷಕರು ಮತ್ತು ಪಾಲಕರು ರೂಢಿಸ ಬೇಕು. ಈ ಬಗ್ಗೆ ಸಮಾಜ ಗಂಭೀರ ಚಿಂತನೆಯನ್ನು ಮಾಡಬೇಕೆಂದು ಬಿಇಒ ವಿಜಯಲಕ್ಷ್ಮಿ ಒಡೆಯರ ಹೇಳಿದರು.

  ಅವರು ಶ್ರೀ ಗುರುರಾಜ ಪ್ರಾಥಮಿಕ ಶಾಲೆ ಹಾಗೂ ಸ್ಪಂದನ ರಂಗ ತಂಡ ಗುರುವಾರ ಪ.ಪಂ. ನವನಗರ ಮಂಗಲ ಭವನದಲ್ಲಿ ಹಮ್ಮಿಕೊಂಡ ಮಕ್ಕಳ ಬೇಸಿಗೆ ಶಿಬಿರದಲ್ಲಿ ಸಿದ್ಧಗೊಂಡ ಶ್ರೀ ಕೃಷ್ಣ ಸಂಧಾನ ಅರ್ಥಾತ್ ಮೇಷ್ಟ್ರ ಪ್ರಾಣ ಸಂಕಟ ಎಂಬ ನಗೆ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪಪಂ ಅಧ್ಯಕ್ಷ ಬಸಪ್ಪ ಆಲೂರ ಉದ್ಘಾಟನೆ ಮಾಡಿ, ಮಕ್ಕಳ ಸೃಜನಶೀಲ ಅಭಿವ್ಯಕ್ತಿಗೆ ಅನುಕೂಲ ವಾಗುವ ಎಲ್ಲ ಚಟುವಟಿಕೆಗಳನ್ನು ಶಾಲೆಗಳಲ್ಲಿ ಮಾಡಿಸಬೇಕು ಎಂದರು.

ಇನ್ನೋರ್ವ ಅತಿಥಿ ಪಪಂ ಉಪಾಧ್ಯಕ್ಷೆ ಅಕ್ಕಮಹಾದೇವಿ ಹಂಡಿ ಮಕ್ಕಳ ಸರ್ವಾಂಗೀಣ ಉನ್ನತಿಗೆ ಪಾಲಕರು ಮತ್ತು ಶಿಕ್ಷಕರು ಸಂಘಟಿತ ವಾಗಿ ಶ್ರಮಿಸಬೇಕೆಂದರು. ಶ್ರೀ ಗುರುರಾಜ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ಜೋಶಿ, ಸ್ಪಂದನ ಕಾರ್ಯದರ್ಶಿ ಶರಣು ಕೋಟಿ, ಶಿಕ್ಷಕಿ ಕೆಸರಭಾವಿ, ನಿರ್ದೇಶಕ ಯತೀಶ್ ಕೊಳ್ಳೆ ಗಾಲ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಾಯೋಜಕ ಬಸವ ರಾಜ ಗೊಣ್ಣಾಗರ ಅವರನ್ನು ಸತ್ಕಾರ, ಮಕ್ಕಳ ಚಿತ್ರಕಲೆ ಪ್ರದರ್ಶನ ಹಾಗೂ ಸಮೂಹಗೀತೆ ಗಾಯನ ನಡೆದವು. ಎಸ್ಕೆ ಕೊನೆಸಾಗರ ಸ್ವಾಗತಿಸಿದರು.
ವಿಜಯಕುಮಾರ ಕುಲಕರ್ಣಿ ವಂದಿಸಿದರು. ಮಯೂರ ಪಾಠಕ ಪ್ರಾರ್ಥಿಸಿದರು.

ಗ್ರಾಹಕರ ಸಮಾವೇಶ:  ಇಲ್ಲಿನ ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರ ಸಮಾವೇಶ ಈಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಹಿರಿಯ ವಕೀಲ ಕೆ.ಎಂ. ಸಾರಂಗಮಠ ಮಾತನಾಡಿ, ರೈತರು ಹಾಗೂ ಸಾಮಾನ್ಯ ಗ್ರಾಹಕರ ಬಗ್ಗೆ ಹೆಚ್ಚಿನ ಆದ್ಯತೆ ಕೊಡಬೇಕು. ಸರ್ಕಾರದ ಯೋಜನೆ ಹಾಗೂ ಅನುದಾನ ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪುವಂತೆ ಸಿಬ್ಬಂದಿ ಶ್ರಮಿಸಬೇಕು ಎಂದರು.ಹಿರಿಯ ವ್ಯವಸ್ಥಾಪಕ ಪಿ.ರಾಜಶೇಖರನ್ ಅಧ್ಯಕ್ಷತೆ ವಹಿಸಿ ಬ್ಯಾಂಕಿನ ಸಾಧನೆಯ ಹೆಜ್ಜೆಗಳನ್ನು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.