ADVERTISEMENT

ಕನ್ನಡ ಪರಿಚಾರಕನಿಗೆ ಮಿಡಿದ ವಿದ್ಯಾಗಿರಿ!

ವೆಂಕಟೇಶ್ ಜಿ.ಎಚ್
Published 2 ನವೆಂಬರ್ 2017, 6:16 IST
Last Updated 2 ನವೆಂಬರ್ 2017, 6:16 IST
ವೆಂಕಟೇಶ್ ಜಿ.ಎಚ್.
ವೆಂಕಟೇಶ್ ಜಿ.ಎಚ್.   

ಬಾಗಲಕೋಟೆ: ಕನ್ನಡ ರಾಜ್ಯೋತ್ಸವದ ದಿನ ಸಂಭ್ರಮದಲ್ಲಿ ತೇಲಬೇಕಿದ್ದ ಇಲ್ಲಿನ ವಿದ್ಯಾಗಿರಿಯ ನಿವಾಸಿಗಳು ವಿಚಿತ್ರ ಸಂಕಟ ಸ್ಥಿತಿ ಎದುರಿಸಿದರು.

ಪ್ರತಿ ವರ್ಷ ನುಡಿ ಹಬ್ಬದ ದಿನ ಕನ್ನಡದ ಧ್ವಜ ಹಿಡಿದು, ಕವಿಗಳು, ಕಲಾವಿದರ ಚಿತ್ರಗಳನ್ನು ತಲೆಯ ಮೇಲೆ ಹೊತ್ತು ಮನೆ ಮನೆಗೆ ತೆರಳಿ ಶುಭಾಶಯ ಹಂಚಿಕೊಳ್ಳುತ್ತಿದ್ದ ತಮ್ಮ ಬಡಾವಣೆಯ ಕನ್ನಡ ಪರಿಚಾರಕ ಪರಶುರಾಮ ಪಲ್ಲೇದ, ಮಂಗಳವಾರ ರಾತ್ರಿ ಮಿದುಳಿನಲ್ಲಿ ರಕ್ತಸ್ರಾವದಿಂದ (ಬ್ರೈನ್ ಹೆಮರೇಜ್‌) ತೀವ್ರ ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ತಿಳಿದು ವೇದನೆ ಪಟ್ಟರು.

ನಾಡು–ನುಡಿ ಹಾಗೂ ವರನಟ ಡಾ.ರಾಜ್‌ಕುಮಾರ ಅವರ ಬಗ್ಗೆ ಅದಮ್ಯ ಪ್ರೀತಿ ಹೊಂದಿದ್ದ ಪರಶುರಾಮ, ವಿದ್ಯಾಗಿರಿಯ ಮುಖ್ಯ ರಸ್ತೆಯ ಸಣ್ಣ ಗೂಡಂಗಡಿಯಲ್ಲಿ ‘ಅಣ್ಣಾ’ ಹೆಸರಿನ ಕ್ಯಾಂಟಿನ್ ನಡೆಸುತ್ತಿದ್ದರು. ಕಳೆದ 18 ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಸತತ ಮೂರು ತಿಂಗಳ ಕಾಲ ರಾಜ್‌ಕುಮಾರ ಹೆಸರಿನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ಕೊಡುತ್ತಿದ್ದರು. ರಾಜ್ ಹುಟ್ಟುಹಬ್ಬದ ದಿನ ಉಪಹಾರದ ವ್ಯವಸ್ಥೆ ಮಾಡುತ್ತಿದ್ದರು. ರಕ್ತದಾನ ಶಿಬಿರ ಆಯೋಜಿಸುತ್ತಿದ್ದರು.

ADVERTISEMENT

ರಾಜ್‌ ಅಭಿಮಾನಿ: ಕ್ಯಾಂಟಿನ್‌ಗೆ ಬರುವವರಿಗೆ ರಾಜ್‌ಕುಮಾರ ಅವರ ಪ್ರಮುಖ ಸಿನಿಮಾ, ಅವುಗಳ ಕಥೆ ಹುಟ್ಟಿದ ಸಮಯ, ಕಲಾವಿದರು, ತಂತ್ರಜ್ಞರ ಬಗ್ಗೆ ಮಾಹಿತಿ ನೀಡುತ್ತಿದ್ದರು. ತಮ್ಮ ಕ್ಯಾಂಟಿನ್‌ನಲ್ಲಿ 10 ರೂಪಾಯಿಗೆ ಪ್ಲೇಟ್ ಉಪಹಾರ ಕೊಡುತ್ತಿದ್ದ ಪಲ್ಲೇದ, ಸುತ್ತಲಿನ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರಿಗೆ ಅಚ್ಚುಮೆಚ್ಚಿನವರಾಗಿದ್ದರು.

ನಿವಾಸಿಗಳ ಅಪ್ಯಾಯತೆ: ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ–ಅಮ್ಮನನ್ನು ಕಳೆದುಕೊಂಡಿದ್ದ ಅವರನ್ನು ಸ್ಥಳೀಯರು ಬಹಳಷ್ಟು ಅಪ್ಯಾಯತೆಯಿಂದ ಕಾಣುತ್ತಿದ್ದರು. ಸ್ಥಳೀಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಪಲ್ಲೇದ ನಾಡಿನ ವಿವಿಧೆಡೆ ನಡೆದ 12 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿನಿಧಿಸಿದ್ದರು. ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡುತ್ತಿದ್ದರು. ಕನ್ನಡ ನಾಡು–ನುಡಿ, ಸಾಂಸ್ಕೃತಿಕತೆಯನ್ನು ದೈನಂದಿನ ಬದುಕಿನ ಅಸ್ಮಿತೆ ಯನ್ನಾಗಿಸಿಕೊಂಡಿದ್ದರು.

ಆರು ದಿನಗಳ ಹಿಂದಷ್ಟೇ ಪರಶುರಾಮ ಪತ್ನಿ ಗದುಗಿನಲ್ಲಿ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಸಂಜೆ ಮನೆಯಲ್ಲಿ ಕುಸಿದುಬಿದ್ದ ಅವರನ್ನು ವಿದ್ಯಾಗಿರಿ ಗೆಳೆಯರ ಬಳಗದ ಶಿವು ಮೇಲ್ನಾಡ ಹಾಗೂ ಸ್ನೇಹಿತರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಬಡಾವಣೆಯ ನಿವಾಸಿಗಳು, ಸ್ಥಳೀಯ ಗೆಳೆಯರ ಬಳಗದ ಸದಸ್ಯರು ಪಲ್ಲೇದ ಚಿಕಿತ್ಸೆಗೆ ಒತ್ತಾಸೆಯಾಗಿ ನಿಂತರು. ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ನೆರವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.