ಬಾಗಲಕೋಟೆ: ಕಮತಗಿಯಲ್ಲಿ ಶುಕ್ರವಾರ ಸಂಜೆ ಬಾವಿಯೊಳಗೆ ಬಿದ್ದು ರಾತ್ರಿಯಿಡಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ ಮಂಗನ ಮರಿಯೊಂದು ಕೊನೆಗೂ ಪ್ರಾಣಿಪ್ರಿಯರ ಸಮಯಪ್ರಜ್ಞೆಯಿಂದ ಬದುಕುಳಿದಿದೆ.
ಕಮತಗಿ ಪಟ್ಟಣದಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ ಎಂದು ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಎರಡು ದಿನಗಳ ಕಾಲ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿ ಸುಮಾರು 150ಕ್ಕೂ ಹೆಚ್ಚು ಕೆಂಪು ಮಂಗಗಳನ್ನು ಹಿಡಿದಿದ್ದಾರೆ.
ಈ ಸಂದರ್ಭದಕಲ್ಲಿ ತನ್ನನ್ನು ಹಿಡಿದುಕೊಂಡು ಹೋಗುತ್ತಾರೆಂಬ ಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮಂಗನ ಮರಿಯೊಂದು ಬಾವಿಯೊಳಗೆ ಬಿದ್ದಿದೆ. ಅದು ಅಲ್ಲಿಯೇ ಸತ್ತಿರಬಹುದು ಎಂದು ಅಧಿಕಾರಿಗಳು ಬಿಟ್ಟು ಹೋಗಿದ್ದರು.
ಬಾವಿಯೊಳಗೆ ಬಿದ್ದ ಮರಿಯನ್ನು ಹೊರ ತಗೆಯಲು ಸಾಕಷ್ಟು ಪ್ರಯತ್ನಪಟ್ಟರು ಅದು ಹೊರಕ್ಕೆ ಬರಲಿಲ್ಲ. ರಾತ್ರಿಯಾದ ಹಿನ್ನೆಲೆಯಲ್ಲಿ ಅತ್ತ ಕಡೆ ಯಾರು ಗಮನ ಹರಿಸಲಿಲ್ಲ. ಆದರೆ ಶನಿವಾರ ಬೆಳಿಗ್ಗೆ ಯುವಕರು ನೋಡಿದಾಗ ಜೀವದ ಭಯದಿಂದ ಕಿರುಚುತ್ತಿದ್ದ ಮಂಗನ ಮರಿಯನ್ನು ಯುವಕರು ಹಗ್ಗಕ್ಕೆ ಬಕೇಟ್ ಕಟ್ಟಿ ಬಾವಿಯೊಳಗೆ ಬಿಟ್ಟರು.
ಬದುಕಿದೆಯಾ ಬಡ ಜೀವ ಎಂಬಂತೆ ಬಕೇಟ್ ಬಿಟ್ಟು ಹಗ್ಗವನ್ನು ಹಿಡಿದುಕೊಂಡು ಸರಸರನೆ ಮೇಲಕ್ಕೆ ಹತ್ತಿ ಬಂದ ಮಂಗನ ಮರಿ ಸುರಕ್ಷಿತವಾಗಿ ಮೇಲೆ ಬಂದು ಓಡಿಹೋಯಿತು. ಬಾವಿಯ ಸುತ್ತಲೂ ಕೂತುಹಲದಿಂದ ನೋಡುತ್ತಿದ್ದವರ ಮೊಗದಲ್ಲಿ ಮಂದಹಾಸ ಮೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.