ADVERTISEMENT

ಕೆರೆ ನಿರ್ಮಾಣಕ್ಕೆ ರೂ. 17 ಲಕ್ಷ ಮಂಜೂರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 8:00 IST
Last Updated 13 ಜೂನ್ 2011, 8:00 IST

ಮುಧೋಳ: ಕೆರೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ನೂರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ  ಮಾಡಿದೆ. ಅವುಗಳನ್ನು ರಕ್ಷಿಸುವ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ತಾಲ್ಲೂಕಿನ ರನ್ನಬೆಳಗಲಿ ಗ್ರಾಮದಲ್ಲಿ ಜಿನುಗು ಕೆರೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಾಕಷ್ಟು ಅತಿಕ್ರಮಣ ಕೆರೆಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಕೆರೆಗಳಿಂದ ಸುತ್ತಲಿನ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಲಿದೆ ಎಂದು ಸಚಿವರು ಭರವಸೆ ನೀಡಿದರು.

ತಾಲ್ಲೂಕಿನಲ್ಲಿ ಹಲವು ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಈ ಪೈಕಿ ರನ್ನಬೆಳಗಲಿಯಲ್ಲಿ 17 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಂಡ ಕೆರೆ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಕೆರೆಗಳ ಅಭಿವೃದ್ದಿಗಾಗಿ ವಿಶೇಷ ಆದ್ಯತೆ ನೀಡಲಾಗಿದೆ. ಕೆರೆಗಳ ದುರಸ್ತಿ, ಹೂಳೆತ್ತುವುದು, ಕೆರೆ ಅಚ್ಚುಕಟ್ಟು ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿದೆ. ಗ್ರಾಮೀಣ ಭಾಗದ ಜನರು ಅದರ ಸದುಪಯೋಗ ಪಡೆದುಕೊಂಡು ಆರ್ಥಿಕ ಅಭಿವೃದ್ಧಿ ಮಾಡಿ ಕೊಳ್ಳಬೇಕು. ಅಲ್ಲದೆ ಸಾಮಾಜಿಕ ಉನ್ನತಿಗೂ ಸಹಾಯಕ ಆಗಲಿದೆ ಎಂದು ಸಚಿವ ಗೋವಿಂದ ಕಾರಜೋಳ  ಹೇಳಿದರು.

ಕೆರೆ ಅಭಿವೃದ್ಧಿ ಕಾಮಗಾರಿ ಕೇವಲ ಸರ್ಕಾರದ ಕೆಲಸ ಅಲ್ಲ. ಅದು ಜನ ಹಿತಕ್ಕಾಗಿ ಎಂಬುದನ್ನು ಅರಿಯಬೇಕು. ಕಾಮಗಾರಿಯ ಗುಣಮಟ್ಟ, ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ಗ್ರಾಮಸ್ಥರೇ ಮಾಡಬೇಕು. ಇದರಿಂದ ಗ್ರಾಮಕ್ಕೆ ಅನುಕೂಲ ಎಂಬುದನ್ನು ಅರಿಯಬೇಕು ಎಂದು ಮನವಿ ಮಾಡಿದರು.

ಕೆರೆ ನಿರ್ಮಾಣದಿಂದ ಅಂತರ್ಜಲ ಹೆಚ್ಚಳ ಆಗುವುದು. ಗ್ರಾಮೀಣ ಭಾಗದ ಜನರಿಗೆ ನಿತ್ಯ ಬಳಕೆಗೆ ಅನುಕೂಲ ಆಗವಂತೆ ಅಭಿವೃದ್ಧಿ ಪಡಿಸಲಾಗುವುದು. ಎಂದು ನುಡಿದರು.

ಎ.ಪಿ.ಎಂ.ಸಿ ಅಧ್ಯಕ್ಷ ಹನಮಂತ ತುಳಸಿಗೇರಿ, ತಾ.ಪಂ. ಅಧ್ಯಕ್ಷೆ ಬಾಯಕ್ಕ ಕುಂಬಾರ, ರಂಗಪ್ಪ ಒಂಟಗೋಡಿ, ಸದಾಶಿವ ಸಂಕ್ರಟ್ಟಿ, ಪರಮಾನಂದ ಸಂಕ್ರಟ್ಟಿ, ಮುತ್ತಪ್ಪ ಚಿಕ್ಕನ್ನವರ, ತಹಸೀಲ್ದಾರ್ ಶಂಕರಗೌಡ ಸೋಮನಾಳ, ತಾ.ಪಂ. ಇಓ ವಿ.ಕೆ. ದೇಶಪಾಂಡೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.