ADVERTISEMENT

ಕೊತ್ತಂಬರಿ ಬೆಳೆದು ಕಂಗಾಲಾದ ರೈತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 10:32 IST
Last Updated 16 ಜುಲೈ 2017, 10:32 IST
ಬನಹಟ್ಟಿಯ ಮಂಗಳವಾರ ಪೇಟೆಗೆ ಅಪಾರ ಪ್ರಮಾಣದ ಕೊತ್ತಂಬರಿ ಸೊಪ್ಪು ಬಂದಿರುವುದು.
ಬನಹಟ್ಟಿಯ ಮಂಗಳವಾರ ಪೇಟೆಗೆ ಅಪಾರ ಪ್ರಮಾಣದ ಕೊತ್ತಂಬರಿ ಸೊಪ್ಪು ಬಂದಿರುವುದು.   

ರಬಕವಿ ಬನಹಟ್ಟಿ: ಒಂದು ವಾರದ ಹಿಂದೆ ಒಂದು ಸಣ್ಣ ಸೂಡು ಕೊತ್ತಂಬರಿ ಸೊಪ್ಪಿಗೆ ₹8 ಇಲ್ಲವೆ ₹10ಗೆ ಮಾರಾಟವಾಗಿತ್ತು. ಆದರೆ ಭಾನುವಾರ ಸ್ಥಳೀಯ ಮಾರುಕಟ್ಟೆಯಲ್ಲಿ ₹20ರಿಂದ 25 ಬೆಲೆಗೆ ದೊರೆಯುತ್ತಿತ್ತು. ಈಗ ಒಂದೆರಡು ರೂಪಾಯಿಗೆ ದೊರೆಯುತ್ತಿದೆ.

ಕೊತ್ತಂಬರಿ ಸೊಪ್ಪು ಬೆಳೆದ ರೈತರು ಈಗ ಕಂಗಾಲಾಗಿದ್ದಾರೆ. ಕೊತ್ತಂಬರಿ ಬೆಳೆಯಲು ಹಾಕಿದ ಖರ್ಚು ತಿರುಗಿ ಬರಲಿಲ್ಲ ಎಂಬುದು ರೈತರ ಅಳಲಾಗಿದೆ. ಈ ಭಾಗದಲ್ಲಿ ಸಾಕಷ್ಟು ಮಳೆ ಇರದೇ ಇದ್ದರೂ ರೈತರು ಸ್ವಲ್ಪ ಲಾಭವನ್ನು ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕೊತ್ತಂಬರಿಯನ್ನು ಬೆಳೆದಿದ್ದರು. ಆದರೆ ಈಗ ಒಮ್ಮೆಲೆ ಕೊತ್ತಂಬರಿಯ ಬೆಲೆ ಮಾರುಕಟ್ಟೆಯಲ್ಲಿ ಬಹಳಷ್ಟು ಕಡಿಮೆಯಾಗಿದೆ.

ಸಮೀಪದ ಚಿಮ್ಮಡ ಗ್ರಾಮದ ರಮೇಶ ಬೆಳಗಾಂವಕರ್‌ ತಮ್ಮ ಹತ್ತು ಗುಂಟೆ ಜಮೀನಿನಲ್ಲಿ ಕೊತ್ತಂಬರಿ ಬೆಳೆದಿದ್ದರು. ‘ಒಂದು ಕೆ.ಜಿ. ಕೊತ್ತಂಬರಿ ಬೀಜಕ್ಕೆ ₹ 85ರಿಂದ ₹90. ಒಂದು ತಿಂಗಳ ಬೆಳೆಯಾದ ಇದಕ್ಕೆ ನೀರು, ಕಸ ತೆಗೆಯುವ ಕಾರ್ಮಿಕರ ಕೂಲಿ, ಗೊಬ್ಬರ ಸೇರಿದಂತೆ ಹತ್ತು ಗುಂಟೆಗೆ ಅಂದಾಜು ₹ 15 ಸಾವಿರದಷ್ಟು ಖರ್ಚು ಬರುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ ಕೇವಲ ಒಂದು ಇಲ್ಲವೆ ಎರಡು ರೂಪಾಯಿಗೆ ಕೊತ್ತಂಬರಿ ಮಾರಾಟವಾಗುತ್ತಿದೆ. ನಾವು ಹಾಕಿದ ಖರ್ಚೂ ನಮಗೆ ತಿರುಗಿ ಬರುತ್ತಿಲ್ಲ’ ಎಂದು ಪತ್ರಿಕೆಗೆ ತಿಳಿಸಿದರು.

ADVERTISEMENT

ಅದೇ ರೀತಿಯಾಗಿ ರೈತರಾದ ಹಂದಿಗುಂದದ ಶರೀಫ್‌ ನದಾಫ್‌, ರೇವಣ್ಣ ಹಿಪ್ಪರಗಿ, ಸುರೇಶ ಇಟ್ನಾಳ ಕೊತ್ತಂಬರಿ ಬೆಳೆಯಿಂದ ಸಾವಿರಾರು ರೂಪಾಯಿಯಷ್ಟು ಹಾನಿಯನ್ನು ಅನುಭವಿಸಿದ್ದಾರೆ.

ಒಟ್ಟಿನಲ್ಲಿ ಕೊತ್ತಂಬರಿ ಬೆಳೆದ ರೈತ ಸದ್ಯ ಸಾಕಷ್ಟು ಹಾನಿಯನ್ನು ಅನುಭವಿಸಿದ್ದಾನೆ. ಈ ಭಾಗದಲ್ಲಿ ಇಲ್ಲಿಯವರೆಗೆ ಉತ್ತಮ ಮಳೆ ಆಗಿಲ್ಲ. ಮಳೆಗಾಲದ ಆರಂಭದಲ್ಲಿ ರೈತರು ಹಾನಿಯನ್ನು ಅನುಭವಿಸುತ್ತಿರುವುದು ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.