ಬದುಕಿನ ಬಹುದಿನಗಳನ್ನು ರಂಗಭೂಮಿಯಲ್ಲಿ ಕಳೆದಿರುವ ಇಲಕಲ್ಲಿನ ಇಳಿವಯಸ್ಸಿನ ಡೀಕಪ್ಪ ಮಾಸ್ತರ ಹಿಟ್ನಾಳ ನಮ್ಮ ನಡುವಿನ ಹಿರಿಯ ರಂಗಪ್ರತಿಭೆ. ಸತತ ಎಂಟು ದಶಕಗಳ ಕಾಲ ರಂಗಸೇವೆಯಲ್ಲಿ ನಿರತರಾಗಿದ್ದು ಅವರಲ್ಲಿನ ಬತ್ತದ ರಂಗಚಿಲುಮೆಯಗೆ ಸಾಕ್ಷಿಯಾಗಿದೆ. ಅವರ ಈವರೆಗಿನ ಬಾಳಿನ ಹಾದಿಯನ್ನು ನೋಡಿದರೆ ಬಡತನವೇ ಎದ್ದು ಕಂಡರೂ ಅಲ್ಲಿ ಮತ್ತೆ ಕಲಾ ಶ್ರೀಮಂತಿಕೆ ನಕ್ಷತ್ರದಂತೆ ಮಿಂಚುತ್ತದೆ. ಇದು ನಾವೆಲ್ಲ ಹೆಮ್ಮೆಪಡುವಂಥದ್ದು.
ಕೇವಲ ಮುಲ್ಕಿ ಪರೀಕ್ಷೆ ಪಾಸು ಮಾಡಿದ ಡೀಕಪ್ಪ ಮಾಸ್ತರ ಮೊದಲು ಅಭಿನಯದ ಹಾದಿಯಲ್ಲಿ ಹೊರಟರೂ ನಂತರ ಅವರು ವಾಲಿದ್ದು ಸಂಗೀತದೆಡೆಗೆ. ಆ ಮೂಲಕ ಹಾರ‌್ಮೋನಿಯಂ ವಾದನದಲ್ಲಿ ಮಾಡಿದ ಸಾಧನೆ ಮತ್ತು ಪಡೆದ ಖ್ಯಾತಿ ನಿಜಕ್ಕೂ ಅಭಿನಂದನಾರ್ಹ. ಈವರೆಗೆ 125 ನಾಟಕಗಳಿಗೆ ನಿರ್ದೇಶಕರಾಗಿ ಮತ್ತು ಸಾವಿರಾರು ನಾಟಕಗಳ ಪೇಟಿ ಮಾಸ್ತರರಾಗಿ ಹಾರ‌್ಮೋನಿಯಂ ನುಡಿಸಿದ್ದಾರೆ. ಇವುಗಳಲ್ಲಿ ಕಂದಗಲ್ಲ ರಾಯರ ಚಿತ್ರಾಂಗದಾ, ಕುರುಕ್ಷೇತ್ರ, ಮಾತಂಗ ಕನ್ಯಾ ಮತ್ತ ಬಡತನ ಭೂತ ನಾಟಕಗಳು ಪ್ರಮುಖ. ಗದುಗಿನ ಪಂ. ಪಂಚಾಕ್ಷರಿ ಗವಾಯಿಗಳು ಹಾಗೂ ಪಂ.ಪುಟ್ಟರಾಜ ಗವಾಯಿಗಳ ನಿತ್ಯ ಆರಾಧನೆಯ ಇವರು ಸಂಗೀತ ಶಾಲೆಯನ್ನು ತೆರೆದು ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದ್ದಾರೆ. ತಮ್ಮ ಈ ಶಾಲೆಯಿಂದ ಶಿಕ್ಷಣ ಪಡೆದ ಶಿಷ್ಯರು ಇಂದು ಆ ಕ್ಷೇತ್ರದಲ್ಲಿ ಬೆಳಗುತ್ತಿರು ವುದನ್ನು ಕಂಡು ತೃಪ್ತಿಪಡುತ್ತಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಆಡಳಿತ ಕಾಲಕ್ಕೆ ಹೈಬ್ರಿಡ್ ಹೆಣ್ಣು ನಾಟಕ ಅಭಿನಯದಿಂದಾಗಿ ಕೆಲವುದಿನ ಜೈಲುವಾಸವನ್ನೂ ಅನುಭವಿಸಿದ ಡೀಕಪ್ಪ ಮಾಸ್ತರ ಹಾಸ್ಯ ಪಾತ್ರ ಮಾಡುವಲ್ಲಿ ನಿಸ್ಸೀಮರು. ಟಿಪ್ಪು ಸುಲ್ತಾನ ನಾಟಕದ ಥ್ಯಾಕರೆ ಪಾತ್ರ ಮರೆಯಲಾರದ್ದು. ಕರ್ನಾಟಕದ ಮೂಲೆಮೂಲೆಗೆ ತಿರುಗಿದ ಇವರು ದಾವಣಗೆರೆ ಕಂಪನಿ, ಗೋಕಾಕ ಶಾರದಾ ಸಂಗೀತ ನಾಟ್ಯ ಮಂಡಳಿ, ಏಣಗಿ ಬಾಳಪ್ಪನವರ ಕಂಪನಿ, ಇಲಕಲ್ಲ ಮೆದಿಕೇರಿ ಕಂಪನಿ, ವಿಜಯಮಾಲಾ ನಾಟ್ಯ ಸಂಘ, ಹುನಗುಂದ ಭುವನೇಶ್ವರಿ ನಾಟ್ಯ ಸಂಘ ಮುಂತಾದ ಕಂಪನಿಗಳಲ್ಲಿ ಮರೆಯದ ಸೇವೆ ಮಾಡಿದ್ದಾರೆ.
ಹೂವಿನಹಡಗಲಿ ರಂಗಭಾರತಿ ಸುವರ್ಣ ರಂಗದಿಗ್ಗಜರು ಪ್ರಶಸ್ತಿಯೂ ಸೇರಿದಂತೆ ಇಲಕಲ್ಲ ಸ್ನೇಹರಂಗ, ಮಹಾಂತಮಠ, ಜೇಸಿ ಸಂಸ್ಥೆ ಹಾಗೂ ಅನೇಕ ನಾಟಕ ಕಂಪನಿಗಳು ಇವರ ಕಲಾಪ್ರೌಢಿಮೆಯನ್ನು ಗುರುತಿಸಿ ಗೌರವಿಸಿವೆ. ಹಾಸ್ಯನಟರಾಜು ಮತ್ತು ಸಂಗೀತ ಮಹಾಚೇತನ ಎಂಬ ಬಿರುದು ನೀಡಿವೆ. ಇಂದಿನ ಅಬ್ಬರದ ದಿನಗಳಲ್ಲಿ ಕೀರ್ತಿಗಿಂತ ಸೇವೆ ಮುಖ್ಯ ಎನ್ನುವ ಇವರ ಸಂಗೀತ ಸೇವೆ ಮಾದರಿಯ. ಬಾಳಿನ ಇಳಿಸಂಜೆಯಲ್ಲಿರುವ ಇವರಿಗೆ ಈವರೆಗೆ ಸರ್ಕಾರದ ಯಾವುದೇ ಪ್ರಶಸ್ತಿ ಅಥವಾ ಗುರುತಿಸುವಿಕೆಯಾಗದಿರುವುದು ನಮ್ಮ ಜನರ ಸಾಂಸ್ಕೃತಿಕ ಕಾಳಜಿಯನ್ನು ತೋರುತ್ತದೆ ಅಲ್ಲವೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.