ADVERTISEMENT

ಬಾಗಲಕೋಟೆ: ಶೇ 72.15ರಷ್ಟು ಮತದಾನ

ಬೀಳಗಿ ಕ್ಷೇತ್ರ ಮೊದಲ ಸ್ಥಾನ, ಜಮಖಂಡಿ ಕೊನೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 13 ಮೇ 2018, 10:54 IST
Last Updated 13 ಮೇ 2018, 10:54 IST
ಬಾಗಲಕೋಟೆ: ಶೇ 72.15ರಷ್ಟು ಮತದಾನ
ಬಾಗಲಕೋಟೆ: ಶೇ 72.15ರಷ್ಟು ಮತದಾನ   

ಬಾಗಲಕೋಟೆ: 2013ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಳಗೊಂಡಿದೆ. ಈ ಬಾರಿ ಶೇ 72.15ರಷ್ಟು ಮತದಾನ ಆಗಿದೆ. ಕಳೆದ ಚುನಾವಣೆಯಲ್ಲಿ ಈ ಪ್ರಮಾಣ ಶೇ 69.81ರಷ್ಟು ಇತ್ತು.

ಮತದಾನ ಪ್ರಮಾಣದಲ್ಲಿ ಬೀಳಗಿ ಕ್ಷೇತ್ರ ಮೊದಲ ಸ್ಥಾನದಲ್ಲಿದೆ. ಜಮಖಂಡಿ ಕೊನೆಯ ಸ್ಥಾನದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಸ್ಪರ್ಧೆಯ ಕಾರಣಕ್ಕೆ ದೇಶದ ಗಮನ ಸೆಳೆದಿರುವ ಬಾದಾಮಿ ಕ್ಷೇತ್ರದಲ್ಲಿ ಶೇ 72ರಷ್ಟು ಮತದಾನ ಆಗಿದೆ.

’ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳನ್ನು ಗುರುತಿಸಿ ಈ ಬಾರಿ ಆ ಪ್ರದೇಶಗಳಲ್ಲಿ ಮತದಾನ ಜಾಗೃತಿ (ಸ್ವೀಪ್) ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಸಾರ್ವಜನಿಕರ ಸಹಭಾಗಿತ್ವವೂ ನೆರವಾಗಿತ್ತು. ಇದರಿಂದ ಈ ಬಾರಿ ಮತದಾನ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದೇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬಿಸಿಲ ಬೇಗೆಯ ನಡುವೆಯೂ ಜನರ ಮತಗಟ್ಟೆಗೆ ಬಂದು ಉತ್ಸಾಹ ತೋರಿದ್ದಾರೆ. ಇದಕ್ಕೆ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರ ಪರಿಶ್ರಮ ಕಾರಣ ಎಂದು ಅವರು ಹೇಳುತ್ತಾರೆ.ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿರುವುದು ರಾಜಕೀಯ ಪಕ್ಷಗಳ ವಿಭಿನ್ನ ಲೆಕ್ಕಾಚಾರಕ್ಕೆ ಕಾರಣವಾಗಿದೆ.

ಮತದಾರರನ್ನು ಕರೆ ತಂದ ವಾಹನಗಳು

ಗುಳೇದಗುಡ್ಡ: ವಿಧಾನಸಭೆ ಚುನಾವಣೆ ನಿಮಿತ್ತ ಬೆಂಗಳೂರಿನಲ್ಲಿ ವಾಸವಿರುವ ಗುಳೇದಗುಡ್ಡದ ಸಾವಿರಾರು ನೇಕಾರ ಮತದಾರರನ್ನು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ವಾಹನ ವ್ಯವಸ್ಥೆ ಮಾಡಿ ಕರೆತಂದರು.

ಬೆಂಗಳೂರಿನಿಂದ 23 ಟೆಂಪು ಟ್ರಾವೆಲ್ಸ್‌, ‌2 ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮತದಾರರನ್ನು ಕರೆದುಕೊಂಡು ಬಂದು ಮತದಾನ ಮಾಡಿಸಲಾಯಿತು.

ಶೇ 70 ಮತದಾನ

ಸಿಂದಗಿ: ಸಿಂದಗಿ ವಿಧಾನಸಭಾ ಮತಕ್ಷೇತ್ರದ ಮತದಾನ ಅಂದಾಜು ಶೇ 70ರಷ್ಟಾಗಿದೆ. ಮತದಾನ ಅತ್ಯಂತ ಶಾಂತರೀತಿಯಲ್ಲಿ ನಡೆದಿದೆ. ಮತದಾನ ಬೆಳಿಗ್ಗೆ 9 ಗಂಟೆಗೆ ಶೇ 3ರಷ್ಟಾಗಿದ್ದರೆ, ಬೆಳಿಗ್ಗೆ 11 ಕ್ಕೆ ಶೇ 23, ಮಧ್ಯಾಹ್ನ 1ಕ್ಕೆ ಶೇ 36, ಮಧ್ಯಾಹ್ನ 3 ಗಂಟೆಗೆ ಶೇ 46, ಸಂಜೆ 5 ಕ್ಕೆ ಶೇ 60ರಷ್ಟು ಮತದಾನ ಆಗಿರುವ ಬಗ್ಗೆ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.