ಕೂಡಲಸಂಗಮ (ಬಾಗಲಕೋಟೆ): ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಸಂಪತ್ತನ್ನು ಲೂಟಿ ಮಾಡಿರುವ ಬಿಜೆಪಿ ಮುಖಂಡರು ರಾಜ್ಯದ್ರೋಹಿಗಳು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೂಡಲಸಂಗಮದಲ್ಲಿ ಸೋಮವಾರ ನಡೆದ `ಕಾಂಗ್ರೆಸ್ ನಡಿಗೆ-ಜನರ ಬಳಿಗೆ~ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಲೂಟಿಕೋರ ಬಿಜೆಪಿ ಮುಖ್ಯಮಂತ್ರಿ ಮತ್ತು ಸಚಿವರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ ಎಂದರು.
ಬಿಜೆಪಿ ಮುಖಂಡರ ಭ್ರಷ್ಟಾಚಾರದಿಂದ ರಾಜಕಾರಣಿಗಳು ಎಂದರೆ ಲೂಟಿಕೋರರು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೊಪಿಸಿದರು.ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಗೊಬ್ಬರ ಕೇಳಿದ ರೈತರಿಗೆ ಗುಂಡು ಹಾರಿಸುವ ಮೂಲಕ ಬೂಟಾಟಿಕೆ ಪ್ರದರ್ಶನ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ತಮ್ಮ ಹೆಂಡತಿ, ಮಕ್ಕಳೊಂದಿಗೆ ಕೋರ್ಟ್ ಕಟೆಕಟೆಯನ್ನು ಏರುವ ಮೂಲಕ ರಾಜ್ಯದ ಗೌರವವನ್ನು ಹಾಳುಮಾಡಿದ್ದಾರೆ ಎಂದರು.ಸಚಿವ ಸಂಪುಟದಲ್ಲಿ ಮುಸ್ಲಿಂರಿಗೆ ಮತ್ತು ಬಲಗೈ ಸಮುದಾಯಕ್ಕೆ ಸ್ಥಾನ ನೀಡಿಲ್ಲ ಎಂದ ಅವರು, ಎಲ್ಲಾ ವರ್ಗವನ್ನು ಬಿಜೆಪಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದರು.
ಮಾಜಿ ಸಚಿವ ರೋಷನ್ ಬೇಗ್ ಮಾತನಾಡಿ, ಅಡ್ವಾಣಿ ಅವರು ಬೆಂಗಳೂರಿನಿಂದ ಭ್ರಷ್ಟಾಚಾರ ರಥಯಾತ್ರೆಯನ್ನು ಆರಂಭಿಸಬೇಕು ಎಂದು ಸಲಹೆ ಮಾಡಿದರು.ಕರ್ನಾಟಕದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹನುಮಂತರಾವ್ ಮಾತನಾಡಿ, ಪ್ರತಿ ವರ್ಷ ವರಮಹಾಲಕ್ಷ್ಮಿ ವ್ರತಕ್ಕೆ ಬಂದು ಕೋಟಿ-ಕೋಟಿ ಹಣವನ್ನು ತೆಗೆದುಕೊಂಡು ಹೋಗಿರುವ ಸುಷ್ಮಾ ಸ್ವರಾಜ್ ಮತ್ತು ಚಿನ್ನದ ಖಡ್ಗ ಸ್ವೀಕರಿಸಿರುವ ನಿತಿನ್ ಗಡ್ಕರಿ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್, ಗುಜರಾತ್‌ನಲ್ಲಿ ಲೋಕಾಯುಕ್ತ ರನ್ನು ನೇಮಿಸಲು ವಿರೋಧ ವ್ಯಕ್ತಪಡಿಸಿರುವ ಬಿಜೆಪಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ್ ಮಾತನಾಡಿ, ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶದ ಮೂಲಕ ಬಾಗಲಕೋಟೆ-ವಿಜಾಪುರ ಅವಳಿ ಜಿಲ್ಲೆಗಳ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.
ಆಲಮಟ್ಟಿ ಜಲಾಶಯದಿಂದ ಅವಳಿ ಜಿಲ್ಲೆಯ ಭೂಮಿಯನ್ನು ನೀರಾವರಿಗೆ ಒಳಪಡಿಸಬೇಕಾದ ಉದ್ದೇಶವನ್ನು ಬಿಜೆಪಿ ಸಚಿವರು ಛಿದ್ರಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ನಡಿಗೆ ಸಂದರ್ಭದಲ್ಲಿ ರಾಜ್ಯದ ಹೊಸ ಪೀಳಿಗೆ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದಾರೆ ಎಂದರು.
ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಈ ಸಂಬಂಧ ಪಕ್ಷದ ಮುಖಂಡರಿಗೆ ಇಚ್ಛಾಶಕ್ತಿ ಮತ್ತು ಬದ್ಧತೆ ಅಗತ್ಯ ಎಂದು ಹೇಳಿದರು.ಲೋಕಾಯುಕ್ತ ವರದಿಯನ್ನು ಜಾರಿಗೊಳಿಸ ದಿದ್ದರೆ ಪ್ರತಿ ತಾಲ್ಲೂಕಿನಲ್ಲೂ ಹೋರಾಟ ನಡೆಸುವ ಮೂಲಕ ಜೈಲಿಗೆ ಹೋಗಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಶಾಂತರಾಮ ನಾಯಕ್, ಹನುಮಂತರಾವ್, ಮಾಜಿ ಸಚಿವರಾದ ಕಾಗೋಡು ತಿಪ್ಪಪ್ಪ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮಾಜಿ ಸಚಿವರಾದ ಬಿ.ಎಲ್. ಶಂಕರ್, ಡಿ.ಕೆ. ಶಿವಕುಮಾರ್, ಎಚ್. ವೈ. ಮೇಟಿ, ಆರ್.ಬಿ. ತಿಮ್ಮಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಮಾಶ್ರೀ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ್, ಜಿ.ಎನ್. ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.