ADVERTISEMENT

ಮತ ಎಣಿಕೆಗೆ ಸಿದ್ಧಗೊಂಡ ವಿ.ವಿ ಆವರಣ

​ಪ್ರಜಾವಾಣಿ ವಾರ್ತೆ
Published 14 ಮೇ 2018, 6:14 IST
Last Updated 14 ಮೇ 2018, 6:14 IST

ಬಾಗಲಕೋಟೆ: ಇಲ್ಲಿನ ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಮೇ 15 ರಂದು ಬೆಳಿಗ್ಗೆ 8 ರಿಂದ ನಡೆಯಲಿದೆ.

ಈ ಕಾರ್ಯಕ್ಕೆ ಅಗತ್ಯವಿರುವ ಭದ್ರತೆ, ವಾಹನ ಪಾರ್ಕಿಂಗ್ ಸೇರಿದಂತೆ ಎಲ್ಲ ರೀತಿಯ ಬಂದೋಬಸ್ತ್ ಕಾರ್ಯ ಕೈಗೊಳ್ಳಲಾಗಿದೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ವಂಶಿಕೃಷ್ಣ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ ಎಣಿಕೆ ಏಜೆಂಟರುಗಳಿಗೆ ವಾಹನ ನಿಲುಗಡೆಗಾಗಿ ತೋ.ವಿ.ವಿಯ ಬಿಟಿಡಿಎ ಯುನಿಟ್ 2ರ ಖಾಲಿ ಜಾಗೆಯಲ್ಲಿ ಅಭ್ಯರ್ಥಿಗಳು, ಮತ ಎಣಿಕೆ ಏಜೆಂಟರು ಹಾಗೂ ಮಾಧ್ಯಮದವರಿಗೆ ಮತ ಎಣಿಕೆ ಕೇಂದ್ರಕ್ಕೆ ಈಶಾನ್ಯ ಭಾಗದಲ್ಲಿರುವ ಪ್ರವೇಶ ದ್ವಾರದ ಮೂಲಕ ಹೋಗಲು ಅವಕಾಶ ಕಲ್ಪಿಸಲಾಗಿದೆ. ಅಧಿಕಾರಿಗಳು ಹಾಗೂ ಮತ ಎಣಿಕೆ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರಕ್ಕೆ ಉತ್ತರ ದಿಕ್ಕಿನಲ್ಲಿರುವ ಮುಖ್ಯದ್ವಾರದ ಮೂಲಕ, ತೋ.ವಿ.ವಿಯ ಎದುರಿಗೆ ಇರುವ ಕೆ.ಐ.ಡಿ.ಬಿ ಜಾಗೆಯಲ್ಲಿ ಸಾರ್ವಜನಿಕರಿಗೆ ಮತ ಎಣಿಕೆ ಸಲುವಾಗಿ ಸೇರುವ ಸ್ಥಳ ಹಾಗೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಮತ ಎಣಿಕೆ ಏಜೆಂಟರು ವಾಹನ ನಿಲುಗಡೆ ನಂತರ ಮತ ಎಣಿಕೆ ಕೇಂದ್ರಕ್ಕೆ ಹೋಗಲು ಈಶಾನ್ಯ ಭಾಗದಲ್ಲಿರುವ ಪ್ರವೇಶದ್ವಾರದ ಮೂಲಕ, ಜಮಖಂಡಿ, ತೇರದಾಳ, ಬಾಗಲಕೋಟೆ ಮತ್ತು ಹುನಗುಂದ ಕ್ಷೇತ್ರದ ಅಭ್ಯರ್ಥಿಗಳು, ಮತ ಎಣಿಕೆ ಏಜೆಂಟರುಗಳು ಮತ ಎಣಿಕೆ ಕೇಂದ್ರಕ್ಕೆ ವಿವಿಯ ಕಟ್ಟಡದ ಪೂರ್ವ ದಿಕ್ಕಿನ ಪ್ರವೇಶದ್ವಾರದ ಮೂಲಕ ಸಂಚರಿಸಬೇಕು. ಮುಧೋಳ, ಬೀಳಗಿ, ಬಾದಾಮಿ ಕ್ಷೇತ್ರದ ಅಭ್ಯರ್ಥಿಗಳು, ಮತ ಎಣಿಕೆ ಏಜೆಂಟರುಗಳು ಹಾಗೂ ಮಾಧ್ಯಮದವರಿಗೆ ಮತ ಎಣಿಕೆ ಕೇಂದ್ರಕ್ಕೆ ಹೋಗಲು ತೋವಿವಿ ಕಟ್ಟಡದ ದಕ್ಷಿಣ ದಿಕ್ಕಿನ ಪ್ರವೇಶ ದ್ವಾರದಲ್ಲಿ, ಅಧಿಕಾರಿಗಳು ಮತ್ತು ಮತ ಎಣಿಕೆ ಸಿಬ್ಬಂದಿಗಳಿಗೆ ಕಟ್ಟಡದ ಮುಖ್ಯ ದ್ವಾರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆಗೆ ಆಗಮಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಾಹನ ನಿಲುಗಡೆಗೆ ಕಟ್ಟಡದ ಪಶ್ಚಿಮ ದಿಕ್ಕಿನಲ್ಲಿರುವ ಖಾಲಿ ಜಾಗೆಯಲ್ಲಿ, ಚುನಾವಣಾ ಅಭ್ಯರ್ಥಿಗಳ ವಾಹನ ನಿಲುಗಡೆಗೆ ತೋ.ವಿ.ವಿಯ ಹೊಸ ಗ್ರಂಥಾಲಯದ ಪಕ್ಕದಲ್ಲಿ ಹಾಗೂ ಮಾಧ್ಯಮದವರ ವಾಹನ ನಿಲುಗಡೆಗೆ ದಕ್ಷಿಣ ದಿಕ್ಕಿನ ಹಿಂಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.