ADVERTISEMENT

ಮನುಷ್ಯ ಕೊಳ್ಳ... ಮಂಗ್ಯಾನ ಕೊಳ್ಳ

ವಿನಾಯಕ ಭೀಮಪ್ಪನವರ
Published 14 ಅಕ್ಟೋಬರ್ 2012, 5:45 IST
Last Updated 14 ಅಕ್ಟೋಬರ್ 2012, 5:45 IST

ಈ ಪ್ರಕೃತಿ ವಿಸ್ಮಯಗಳ ಆಗರ. ಅಂತಹ ಒಂದು ಅಚ್ಚರಿ `ಮನುಷ್ಯ ಕೊಳ್ಳ~.

ರಟ್ಟೀಹಳ್ಳಿ ಸಮೀಪದ ಗುಡ್ಡದಮಾದಾಪುರ ಗ್ರಾಮದ ಅಂಚಿಗೆ  ಹೊಂದಿಕೊಂಡಂತೆ ಇರುವ ಬೆಟ್ಟಗಳ ಸಾಲಿನಲ್ಲಿ ಸ್ಥಾಪಿಸಿದ ಕರಡಿಕೊಳ್ಳ ಸಿದ್ದೇಶ್ವರ ದೇವಸ್ಥಾನದ ಸ್ಥಳ ಮಹಿಮೆ ಆಶ್ಚರ್ಯಕರವಾಗಿದೆ. ಶತಮಾನಗಳ ಹಿಂದೆ ಹಿಮಾಲಯ ಪರ್ವತ ಪ್ರದೇಶದಿಂದ ಸೋಮಶೇಖರ ಮತ್ತು ಚಿತ್ರಶೇಖರ ಎಂಬ ಮುನಿಗಳು ಲೋಕ ಸಂಚಾರ ಮಾಡುತ್ತ ಈ ಪ್ರದೇಶಕ್ಕೆ ಬರುತ್ತಾರೆ. ಈ ಪರ್ವತ ಪ್ರದೇಶದಲ್ಲಿರುವ ಎರಡು ಕೊಳ್ಳಗಳು ಇವರಿಬ್ಬರ ಗಮನ ಸೆಳೆಯುತ್ತವೆ. ವಿಶ್ರಮಿಸಿಕೊಳ್ಳುವುದರ ಸಲುವಾಗಿ ಮೊದಲು ಸ್ವಲ್ಪ ಮೇಲಿನ ಹಂತದಲ್ಲಿರುವ ಕೊಳ್ಳದಲ್ಲಿ ಸ್ನಾನ ಮಾಡುತ್ತಾರೆ. ಸ್ನಾನ ಮಾಡಿದಾಕ್ಷಣ ದೇಹದಲ್ಲಿ ವಿದ್ಯುತ್ ಸಂಚಾರವಾದಂತಾಗಿ ವಿಶೇಷವಾದ ಅನುಭವವಾಗುತ್ತದೆ. ಮನವೆಲ್ಲ ತೃಪ್ತಿದಾಯಕವಾಗಿ ಸಂತಸ ಹೊರಹೊಮ್ಮುತ್ತದೆ.

ಕೆಳ ಹಂತದಲ್ಲಿರುವ ಇನ್ನೊಂದು ಕೊಳದಲ್ಲಿ ಚಿತ್ರಶೇಖರ ಸ್ನಾನ ಮಾಡಲು ಬಯಸುತ್ತಾನೆ. ಚಿತ್ರಶೇಖರ ಈ ಕೊಳದಲ್ಲಿ ಸ್ನಾನ ಮಾಡಿದಾಕ್ಷಣ ಕೋತಿಯಾಗಿ(ಮಂಗ) ಪರಿಣಮಿಸುತ್ತಾನೆ. ಇದನ್ನು ಕಂಡ ಸೋಮಶೇಖರ ಒಂದು ಕ್ಷಣ ದಂಗಾಗಿ ಹೋಗುತ್ತಾನೆ. ಇದು ಹೀಗೇಕೆ ? ಎಂದು ಚಿಂತಿಸುತ್ತಾನೆ. ತನ್ನ ತಪೋ ಶಕ್ತಿಯಿಂದ ಕೆಳ ಹಂತದ ಕೊಳದ ಮಹಿಮೆಯನ್ನು ಅರಿತುಕೊಳ್ಳುತ್ತಾನೆ. ಕೋತಿಯಾಗಿ ಮಾರ್ಪಟ್ಟ ಚಿತ್ರಶೇಖರನನ್ನು ಮೇಲಿನ ಕೊಳ್ಳದಲ್ಲಿ ಸ್ನಾನ ಮಾಡಿಸುತ್ತಾನೆ. ಅಚ್ಚರಿ ಎಂಬಂತೆ ಚಿತ್ರಶೇಖರ ಮೊದಲಿನಂತೆ ಮಾನವನಾಗಿ ಮಾರ್ಪಡುತ್ತಾನೆ. ಸೋಮಶೇಖರ ಮುನಿ ಇದನ್ನು ಪದೇ-ಪದೇ ಪರೀಕ್ಷಿಸಿ ನೋಡುತ್ತಾನೆ. ಆಗ ಅವರಿಬ್ಬರು ಮೇಲಿನ ಕೊಳ್ಳಕ್ಕೆ `ಮನುಷ್ಯ ಕೊಳ್ಳ~ ಎಂದೂ  ಕೆಳ ಹಂತದ ಕೊಳಕ್ಕೆ `ಮಂಗ್ಯಾನ ಕೊಳ್ಳ~ ಎಂದೂ ನಾಮಕರಣ ಮಾಡುತ್ತಾರೆ. ಇದನ್ನು ಹಾಗೇ ಬಿಟ್ಟರೆ ಈ ಮಾನವ ಪ್ರಪಂಚ ದುರುಪಯೋಗ ಪಡಿಸಿಕೊಳ್ಳುವ ಅವಕಾಶಗಳು ಹೆಚ್ಚು ಎಂದು ಚಿಂತಿಸಿದ ಮುನಿಗಳು ಮಂಗ್ಯಾನ ಕೊಳ್ಳದಲ್ಲಿ ನೀರು ನಿಲ್ಲದಂತೆ ಶಾಪ ಕೊಡುತ್ತಾರೆ.

ಅಚ್ಚರಿಯೆಂಬಂತೆ ಇಂದಿಗೂ ಈ ಮಂಗ್ಯಾನ ಕೊಳ್ಳದಲ್ಲಿ ಒಂದೇ ಒಂದು ಹನಿ ನೀರು ನಿಲ್ಲುವುದಿಲ್ಲ. ಹರಿದು ಹೋಗಿ ಮುಂದೆ ಕಣ್ಮರೆಯಾಗುತ್ತದೆ. ಅದರೆ ಮನುಷ್ಯ ಕೊಳ್ಳದಲ್ಲಿ ಮಾತ್ರ ಸದಾಕಾಲ ನೀರು ಇರುತ್ತದೆ. ಎಂತಹ ಬಿರು ಬೇಸಿಗೆಯೇ ಇರಲಿ ಇಲ್ಲಿ ಮಾತ್ರ ನೀರು ಬತ್ತುವುದಿಲ್ಲ. ಬೆಟ್ಟದ ತುದಿಯ ಮೇಲೂ ಒಂದು ಕೊಳ್ಳವಿದೆ. ಆದರೆ ಹೆಜ್ಜೇನುಗಳ ಕಾಟ ಇರುವುದರಿಂದ ಯಾರೂ ಅಲ್ಲಿಗೆ ಹೋಗುವುದಿಲ್ಲ.

 ಇನ್ನೊಂದು  ಐತಿಹ್ಯದ ಪ್ರಕಾರ  ಸಿದ್ದೇಶ್ವರ ದೇವರು ದಟ್ಟ ಕಾನನದ ಮಧ್ಯೆ ಇದ್ದ. ಮಾದಾಪುರ ಗ್ರಾಮದ ಗೌಡರ ಮನೆಯ ಆಕಳು ಮನೆಯಲ್ಲಿ ಹಾಲು ಕೊಡುತ್ತಿರಲಿಲ್ಲ. ಇದನ್ನು ಕಂಡು ಗೌಡರು ಚಿಂತೆಗೆ ಒಳಗಾಗಿದ್ದರು. ಒಂದು ದಿನ ದನ ಕಾಯುವ ಹುಡುಗ ಈ ಆಕಳನ್ನು ಹಿಂಬಾಲಿಸಿದ. ಆಕಳು ಮೇಯುವುದನ್ನು ಬಿಟ್ಟು ದಟ್ಟ ಕಾನನ ಪ್ರವೇಶಿಸಿ ಗುಹೆಯೊಳಗೆ ಹೋಗುವುದನ್ನು ಕಂಡ. ಅವನೂ  ಅದನ್ನು ಹಿಂಬಾಲಿಸಿಕೊಂಡು ಹೋಗಿ ನೋಡಿದಾಗ ಅವನಿಗೆ ಅಚ್ಚರಿ ಕಾದಿತ್ತು. ಆಕಳು ಹಾಲು ಕರೆಯುತ್ತಿತ್ತು. ಹಾಲು ಗುಹೆಯೊಳಗೆ ಹೋಗುತ್ತಿತ್ತು. ಇದನ್ನು ಗೌಡರಿಗೆ ತಿಳಿಸಿದಾಗ ಗೌಡರೂ ಆಶ್ಚರ್ಯ ವ್ಯಕ್ತಪಡಿಸಿ ಆಕಳು ಹೋದ ಗುಹೆಯನ್ನು ಪ್ರವೇಶಿಸಿ  ನೋಡುತ್ತಾರೆ. ಅಲ್ಲೊಂದು ಶಿವಲಿಂಗದ ಆಕೃತಿ. ಆ ಶಿವಲಿಂಗಕ್ಕೆ ಆಕಳು ಹಾಲು ಕರೆಯುತ್ತಿತ್ತು.  ಹೀಗೇ ಮಾನವ ಪ್ರಪಂಚಕ್ಕೆ ಪರಿಚಯವಾಯಿತು. ನಂತರದ ಕಾಲದಲ್ಲಿ ದೇವಸ್ಥಾನ ನಿರ್ಮಾಣವಾಯಿತು. ಇಂದು ಸುಸಜ್ಜಿತ ಸಮುದಾಯ ಭವನ, ಅಡುಗೆ ಮನೆ, ನೀರಿನ ಸೌಕರ್ಯ ಎಲ್ಲ ಸೌಲಭ್ಯಗಳನ್ನು ಹೊಂದಿದ ಮತ್ತು ಪ್ರಕೃತಿಯ ಸುಂದರ ತಾಣವಾಗಿದೆ. ನವಿಲುಗಳು ಕೇಕೆ ಹಾಕಿ ಕೂಗಿ ನಿಮ್ಮನ್ನು ಸ್ವಾಗತಿಸುತ್ತವೆ. ಅನೇಕ ದಶಕಗಳ ಹಿಂದೆ ಕರಡಿಗಳ ಆವಾಸಸ್ಥಾನವಾಗಿದ್ದ ಸಿದ್ಧೇಶ್ವರ ದೇವಸ್ಥಾನದ ಬೆಟ್ಟದಲ್ಲಿ ಇಂದು ಒಂದೇ ಒಂದು ಕರಡಿಯಿಲ್ಲ. ಆದರೆ ಕರಡಿಗಳ ವಾಸಸ್ಥಾನವಾಗಿದ್ದ ಕಾರಣ `ಕರಡಿಕೊಳ್ಳ ಸಿದ್ಧೇಶ್ವರ~ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

 ಇಂದು ಅನೇಕ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹರಕೆ, ಮುಡಿಪು ಕಟ್ಟುತ್ತಾರೆ. ಸಿದ್ಧೇಶ್ವರನ ಸನ್ನಿಧಿಯಲ್ಲಿ ತಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಅರಸುತ್ತಾರೆ.

 ಮಾನವ ಪ್ರಪಂಚದಿಂದ ದೂರವಿರುವ ಕಾರಣ ಮೌನ ಮತ್ತು ಶಾಂತಿ ಇಲ್ಲಿ ಮನೆ ಮಾಡಿದೆ. ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದಾಳೆ. ರಜಾ ಕಾಲದಲ್ಲಿ ಪ್ರಕೃತಿಯ ಸುಂದರ ಪರಿಸರದಲ್ಲಿ ಕಾಲ ಕಳೆಯಲು ಪ್ರಶಸ್ತವಾದ ಸ್ಥಳ. ರಜೆ ಇದೆ. ಬನ್ನಿ, ಮಕ್ಕಳನ್ನೂ ಕರೆ ತನ್ನಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT