ADVERTISEMENT

ಮನೆ-ಮನೆ ಕಸ ಸಂಗ್ರಹಕ್ಕೆ ಮುಂದಾದ ನಗರಸಭೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 7:40 IST
Last Updated 5 ನವೆಂಬರ್ 2012, 7:40 IST
ಮನೆ-ಮನೆ ಕಸ ಸಂಗ್ರಹಕ್ಕೆ ಮುಂದಾದ ನಗರಸಭೆ
ಮನೆ-ಮನೆ ಕಸ ಸಂಗ್ರಹಕ್ಕೆ ಮುಂದಾದ ನಗರಸಭೆ   

ಬಾಗಲಕೋಟೆ: ರಾಜಧಾನಿ ಬೆಂಗಳೂರಿನಲ್ಲಿ `ತ್ಯಾಜ್ಯ~ ವಿಲೇವಾರಿ ಬೃಹದಾಕಾರ ಸಮಸ್ಯೆಯಾಗಿ ಮಾರ್ಪಟ್ಟಿರುವ ಸಂದರ್ಭದಲ್ಲೇ ಬಾಗಲಕೋಟೆ ನಗರಸಭೆ `ತ್ಯಾಜ್ಯ~ ಸಂಗ್ರಹಕ್ಕೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದೆ.

ನಗರದ ಪ್ರತಿ ವಾರ್ಡ್ ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ ಕಸ ಸಂಗ್ರಹಕ್ಕಾಗಿ `ಕಂಟೈನರ್~ಗಳನ್ನು ಇಡಲಾಗಿದೆ. ಆದರೂ, ಸಾರ್ವಜನಿಕರು ತಮ್ಮ ಮನೆಯ ಕಸವನ್ನು ಕಂಟೈನರ್‌ಗಳಿಗೆ ತಂದು ಹಾಕುವ ಬದಲು ಗಟಾರಕ್ಕೆ, ರಸ್ತೆಗೆ ತಂದು ಬಿಸಾಡುವ ಮೂಲಕ ನಗರಸಭೆಯ ಸ್ವಚ್ಛತೆಗೆ ಸ್ಪಂದಿಸದ ಕಾರಣ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿಯೇ ಕಾಡತೊಡಗಿದೆ.

ಇದನ್ನು ಮನಗಂಡ ನಗರಸಭೆ ಅಧಿಕಾರಿಗಳು ಪ್ರತಿ ಮನೆಗೆ 10 ಲೀಟರ್ ಸಾಮಾರ್ಥ್ಯದ ಎರಡು ಪ್ಲಾಸ್ಟಿಕ್ ಡಬ್ಬಿ (ಡಸ್ಟ್‌ಬಿನ್) ನೀಡಿ, ಕಸವನ್ನು ಮೂಲದಲ್ಲೇ ಬೇರ್ಪಡಿಸಿ, ಪ್ರತಿ ದಿನ ಕಸವನ್ನು ಸಂಗ್ರಹಿಸಿ, ಸೂಕ್ತ ವಿಲೇವಾರಿ ಮಾಡಲು ನಿರ್ಧರಿಸಿದೆ.

ಹಳೆ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ 27 ಸಾವಿರ ಕುಟುಂಬಗಳಿದ್ದು, ಪ್ರತಿ ಮನೆಗೆ ಎರಡರಂತೆ 54 ಸಾವಿರ ಕಸದ ಡಬ್ಬಿಗಳ ಅವಶ್ಯವಿದೆ. ಹೀಗಾಗಿ ನಗರಸಭೆ ಪ್ರಾಯೋಗಿಕವಾಗಿ ಆಯ್ದ ವಾರ್ಡ್‌ಗಳ 6 ಸಾವಿರ ಕುಟುಂಬಗಳಿಗೆ ಮಾತ್ರ ಪ್ಲಾಸ್ಟಿಕ್ ಡಬ್ಬಿಗಳನ್ನು ನೀಡಲು ನಿರ್ಧರಿಸಿದೆ.

ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ನಗರಸಭೆ ಪೌರಾಯುಕ್ತ ಎ.ಬಿ.ಶಿಂಧೆ, ರೂ. 12.5 ಕೋಟಿ ವೆಚ್ಚದಲ್ಲಿ 12 ಸಾವಿರ ತ್ಯಾಜ್ಯ ಸಂಗ್ರಹ ಪ್ಲಾಸ್ಟಿಕ್ ಡಬ್ಬಿಗಳನ್ನು ಖರೀದಿಸಿದ್ದು, ವಾರ್ಡ್ ನಂ 1 ಮತ್ತು ಕೊಳಚೆ ಪ್ರದೇಶವೊಂದನ್ನು ಗುರುತಿಸಿ  ಒಂದು ಬಿಳಿ (ಹಸಿ ಕಸ ಸಂಗ್ರಹ) ಮತ್ತು ಇನ್ನೊಂದು ಹಸಿರು ಡಬ್ಬಿ(ಒಣ ಕಸ ಸಂಗ್ರಹ) ನೀಡಲಾಗುವುದು ಎಂದರು.

ಪ್ರತಿ ದಿನ ನಗರಸಭೆ ಸಿಬ್ಬಂದಿ 4 ಆಟೋ-ಟಿಪ್ಪರ್‌ಗಳಲ್ಲಿ ಮನೆ-ಮನೆಗೆ ತೆರಳಿ ಹಸಿ ಕಸವನ್ನು ಮಾತ್ರ ಸಂಗ್ರಹಿಸುತ್ತಾರೆ. ಒಣ ಕಸವನ್ನು ವಾರಕೊಮ್ಮೆ ಸಂಗ್ರಹಿಸಲಿದ್ದಾರೆ. ಹಸಿ ಕಸವನ್ನು ಎರೆಹುಳು ಮತ್ತು ಜೈವಿಕ ಗೊಬ್ಬರ ತಯಾರಿಕೆಗೆ ಬಳಸಿಕೊಳ್ಳಲಾಗುವುದು ಮತ್ತು ಒಣ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದರು.

2013 ಮಾರ್ಚ್ 31ರೊಳಗೆ 6 ಸಾವಿರ ಕುಟುಂಬಕ್ಕೆ ಡಸ್ಟ್‌ಬಿನ್ ನೀಡಲಾಗುವುದು, ಪ್ರಾಯೋಗಿಕ ಜಾರಿ ಯಶಸ್ವಿಯಾದರೆ, ಎಲ್ಲ 27 ಸಾವಿರ ಕುಟಂಬಕ್ಕೂ ಡಸ್ಟ್‌ಬಿನ್ ನೀಡುವ ಯೋಜನೆ ಇದೆ ಎಂದು ತಿಳಿಸಿದರು. ಇನ್ನು ಮುಂದಾದರೂ ಬಾಗಲಕೋಟೆ  ನಗರ ಕಸ ಮುಕ್ತವಾಗಲಿದೆಯೇ ಕಾದುನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.