ಜಮಖಂಡಿ: ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಾಲೇಜು ತಂಡ 3–0 ನೇರ ಸೆಟ್ಗಳಿಂದ ಅತಿಥೇಯ ಬಿಎಲ್‌ಡಿಇ ಸಂಸ್ಥೆಯ ಪದವಿ ಕಾಲೇಜಿನ ತಂಡವನ್ನು ಮಣಿಸುವ ಮೂಲಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಂತರ ವಲಯ ಮಟ್ಟದ ಪುರುಷರ ವಾಲಿಬಾಲ್ ಚಾಂಪಿಯನ್‌ಷಿಪ್ ಪಡೆಯಿತು.
ಇಲ್ಲಿನ ಐತಿಹಾಸಿಕ ಪೋಲೊ ಮೈದಾನದ ತಾಲ್ಲೂಕು ಕ್ರೀಡಾಂಗಣದಲ್ಲಿ ಅತಿಥೇಯ ಬಿಎಲ್‌ಡಿಇ ಸಂಸ್ಥೆಯ ಪದವಿ ಕಾಲೇಜಿನ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಟೂರ್ನಿಯ ಉತ್ತಮ 5 ಸೆಟ್‌ಗಳ ಫೈನಲ್ ಪಂದ್ಯದಲ್ಲಿ 25–1, 25–17 ಹಾಗೂ 25–17 ಪಾಯಿಂಟ್ ಗಳಿಸಿದ ಮಹಾಲಿಂಗಪುರ ತಂಡ ಈ ಸಾಧನೆ ಮಾಡಿತು.
ಮಹಾಲಿಂಗಪುರ ತಂಡದ ಇಮ್ತಿಯಾಜ್, ಶಿವು, ಹನಮಂತ, ಸಲೀಂ ಪ್ರದರ್ಶಿಸಿದ ಹೊಂದಾಣಿಕೆಯ ಆಟ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಅತಿಥೇಯ ಬಿಎಲ್‌ಡಿಇ ಸಂಸ್ಥೆಯ ಕಾಲೇಜು ತಂಡ ಮೂಡಲಗಿ ಕಾಲೇಜು ತಂಡವನ್ನು ಹಾಗೂ ಮಹಾಲಿಂಗಪುರ ಎಸ್‌ಸಿಪಿ ಕಾಲೇಜು ತಂಡ ವಿಜಾಪುರದ ದರ್ಬಾರ್ ಕಾಲೇಜು ತಂಡಗಳನ್ನು ಮಣಿಸಿ ಫೈನಲ್ ಪ್ರವೇಸಿದ್ದವು.
ಮಹಾಲಿಂಗಪುರ ತಂಡದ ಸಲೀಂ ಹಳಿಂಗಳಿ ಅವರು ಆಲ್‌ರೌಂಡರ್ ಹಾಗೂ ಅತಿಥೇಯ ತಂಡದ ಸಂಗಮೇಶ ಬಾಡಗಿ ಬೆಸ್ಟ್ ಸ್ಮ್ಯಾಶರ್ ಪ್ರಶಸ್ತಿಗೆ ಭಾಜನರಾದರು.
‘ಕ್ರೀಡೆ ಧ್ಯಾನದಂತೆ’
ಜಮಖಂಡಿ: ಮನಸ್ಸನ್ನು ಕೇಂದ್ರೀಕರಿಸಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಧ್ಯಾನದಿಂದ ದೊರೆಯುವ ಲಾಭ ಪಡೆಯಬಹುದು ಎಂದು ನಿವೃತ್ತ ಎಸ್ಪಿ ಶಂಕರ ಮಂಟೂರ ಅಭಿಪ್ರಾಯ ಪಟ್ಟರು.
ಸ್ಥಳೀಯ ಬಿಎಲ್‌ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಇಲ್ಲಿನ ಐತಿಹಾಸಿಕ ಪೋಲೊ ಮೈದಾನದ ತಾಲ್ಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಂತರ ವಲಯ ಮಟ್ಟದ ಪುರುಷರ ವಾಲಿಬಾಲ್ ಟೂರ್ನಿಯ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಪಾರಿತೋಷಕ ವಿತರಿಸಿ ಅವರು ಮಾತನಾಡಿದರು.
ಬಾಗಲಕೋಟೆ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತರ ವಲಯ ಮಟ್ಟದ ಟೂರ್ನಿಯನ್ನು ಪ್ರತಿ ವರ್ಷ ಸೆಪ್ಟೆಂಬರ್ ವೇಳೆಗೆ ಸಂಘಟಿಸಿ ವಿಶ್ವವಿದ್ಯಾಲಯದ ವಾಲಿಬಾಲ್ ತಂಡವನ್ನು ರಚಿಸಬೇಕು ಮತ್ತು ಪ್ರತಿ ಎರಡು ವರ್ಷಕ್ಕೊಮ್ಮೆ ಆಯ್ಕೆ ಸಮಿತಿಯನ್ನು ಪುನರ್ ರಚಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಲಹೆ ನೀಡಿದರು.
ಅಂತರ ವಲಯ ಮಟ್ಟದಲ್ಲಿ ಚಾಂಪಿಯನ್‌ಷಿಪ್ ಹಾಗೂ ರನ್ನರ್ಅಪ್ ಸ್ಥಾನ ಪಡೆದ ತಂಡಗಳ ಯಾವೊಬ್ಬ ಆಟಗಾರರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಲಿಬಾಲ್ ತಂಡದಲ್ಲಿ ಸ್ಥಾನ ಪಡೆಯದಿರುವುದು ದುರ್ದೈವದ ಸಂಗತಿ ಎಂದರಲ್ಲದೆ ಆಯ್ಕೆ ಸಮಿತಿ ಸದಸ್ಯರು ನಿಷ್ಪಕ್ಷಪಾತದಿಂದ ತಂಡದ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದರು.
ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಎಚ್. ಲಗಳಿ, ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ಎಲ್. ನಾರಾಯಣಕರ, ಸಂಘಟನಾ ಕಾರ್ಯದರ್ಶಿ ಪ್ರೊ.ಎ.ಬಿ. ಖೋತ, ಡಾ.ಟಿ.ಪಿ. ಗಿರಡ್ಡಿ ವೇದಿಕೆಯಲ್ಲಿದ್ದರು.
ಕಾಲೇಜಿನ ಕ್ರೀಡಾ ವಿಭಾಗದ ಉಪಾಧ್ಯಕ್ಷ ಡಾ.ಎಸ್.ಜಿ. ಹಿರೇಮಠ ಸ್ವಾಗತಿಸಿದರು. ಪ್ರೊ.ಎಸ್.ಬಿ. ಕಮತಿ ನಿರೂಪಿಸಿದರು. ಪ್ರೊ. ಕೆ. ಚನ್ನಬಸಪ್ಪ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.