ADVERTISEMENT

ಶಾಲೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಹಣ ಮಂಜೂರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 7:30 IST
Last Updated 20 ಅಕ್ಟೋಬರ್ 2012, 7:30 IST

ಬೀಳಗಿ:ತಾಲೂಕಿನಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ 30ಶಾಲೆಗಳಿಗೆ  ಶೌಚಾಲಯ ನಿರ್ಮಿಸಲು ಹೆಚ್ಚುವರಿಯಾಗಿ ತಲಾ ರೂ.35ಸಾವಿರ ಮಂಜೂರಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಆರ್.ಸಿ.ಕಮತ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಅಕ್ಷರ ದಾಸೋಹ ಯೋಜನೆಯ ಚಾಲನಾ ಮತ್ತು ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮೂರುವರೆ ಸಾವಿರ ಹಣವನ್ನು ಎನ್.ಆರ್.ಇ.ಜಿ. ಯೋಜನೆಯಿಂದ ಹಾಗೂ ಮೂವತ್ತೊಂದೂವರೆ ಸಾವಿರ ಹಣವನ್ನು ನಿರ್ಮಲ ಭಾರತ ಅಭಿಯಾನ ಯೋಜನೆಯಿಂದ ಪಡೆದು  ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ತಾಲ್ಲೂಕಿನ ಒಟ್ಟು ಶಾಲೆಗಳಿಗೆ 530 ಅಡುಗೆ ಅನಿಲ ಸಿಲಿಂಡರ್‌ಗಳ ಅವಶ್ಯಕತೆ ಇದೆ. ಕಳೆದ ತಿಂಗಳು ಸಿಲಿಂಡರ್ ಪೂರೈಕೆಯಲ್ಲಿ ಒಂದಿಷ್ಟು ವ್ಯತ್ಯಯವಾಗಿದೆ.  ವ್ಯತ್ಯಯವಾಗದಂತೆ ಪೂರೈಸಲು ವಿತರಕರಿಗೆ ಸೂಚಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಮನವಿ ಮಾಡಿಕೊಳ್ಳಲಾಗುವು ಎಂದು ತಿಳಿಸಿದರು.
 ಕೋಲೂರು ಪ್ರಾಥಮಿಕ ಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರು ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಲೆಕ್ಕ ಪತ್ರ ಒಪ್ಪಿಸಿಲ್ಲ. ಹೀಗಾಗಿ ಅಲ್ಲಿಯ ಬಿಸಿಯೂಟದ ಅಡುಗೆ ಕೋಣೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ ಎಂದು ಹೇಳಿದರು.

ಮುಂದಿನ ತಿಂಗಳು ಮುಖ್ಯಾಧ್ಯಾಪಕರು ಹಾಗೂ ಮುಖ್ಯ ಅಡುಗೆಯವರನ್ನು ಸೇರಿಸಿ ಸಭೆ ನಡೆಸಲಾಗುವುದು.  ತರಕಾರಿ, ದಿನಸಿ, ಉರುವಲು ಖರೀದಿ ಇತ್ಯಾದಿಗಳ ಮಾಹಿತಿ ಹಾಗೂ ಉಭಯತರ ಜವಾಬ್ದಾರಿ, ಸ್ವಚ್ಛತೆ ಕುರಿತು ಮಾಹಿತಿ ನೀಡಲಾಗುವುದು ಎಂದು ಸಭೆಗೆ ತಿಳಿಸಿದರು.

ತಾಲೂಕಿನಲ್ಲಿ ಈಗಾಗಲೇ 25 ಶಾಲೆಗಳಲ್ಲಿ ಪ್ರತಿ ಶನಿವಾರ ಮಕ್ಕಳಿಗೆ ಇಡ್ಲಿ, ಸಾಂಬಾರ ಕೊಡಲಾಗುತ್ತಿದೆ. ಆಯಾ ಗ್ರಾಮಗಳ ದಾನಿಗಳು ಇಡ್ಲಿ ಬೇಯಿಸಲು ಪಾತ್ರೆಗಳನ್ನು ದೇಣಿಗೆ ನೀಡಿದರೆ ಎಲ್ಲ ಶಾಲೆಗಳಲ್ಲಿಯೂ ಮಕ್ಕಳಿಗೆ ಇಡ್ಲಿ ಕೊಡಲು ಸಾಧ್ಯವಾಗಲಿದೆ.  ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಈ ಕುರಿತು ದಾನಿಗಳ ಮನ ಒಲಿಕೆಗೆ ಯತ್ನಿಸಬೇಕು ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ವೀರೇಶ ಜೇವರಗಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರು ಸೇರಿ ಕೋಲೂರು ಶಾಲೆಯಿಂದ  ಅಡುಗೆ ಕೋಣೆ ನಿರ್ಮಾಣಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ವಶಪಡಿಸಿಕೊಂಡು ಈಗ ಸದ್ಯಕ್ಕಿರುವ ಮುಖ್ಯಾಧ್ಯಾಪಕರಿಗೆ ಹಣಕಾಸು ವಹಿವಾಟು ಒಪ್ಪಿಸಿ ಅರ್ಧಕ್ಕೆ ನಿಂತಿರುವ ಅಡುಗೆ ಕೋಣೆ ನಿರ್ಮಾಣ ಕಾರ್ಯ ಮುಂದುವರಿಸಲು  ಒಮ್ಮತದಿಂದ ಠರಾವು ಪಾಸು ಮಾಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ.ದಾಸರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮೋಳೆ, ಸದಸ್ಯರಾದ ಜಿ.ಬಿ.ಕುಂಬಾರ, ವಾಣಿಶ್ರೆ ಕನಮಡಿ, ಬಿ.ಎಸ್.ಹೆಳವರ, ವೀರೇಂದ್ರ ಶೀಲವಂತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.