ADVERTISEMENT

ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 7:07 IST
Last Updated 7 ಜೂನ್ 2013, 7:07 IST

ಬಾಗಲಕೋಟೆ: ಕಡ್ಡಾಯ ಶಿಕ್ಷಣ ಹಕ್ಕು ಸಮರ್ಪಕ ಜಾರಿಗೆ ಆಗ್ರಹಿಸಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಪದಾಧಿಕಾರಿಗಳು (ಎಸ್‌ಐಒ) ಗುರುವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

`ಆರ್‌ಟಿಇ ಜಾರಿಯಾಗಲಿ'
`ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ದಲಿತರು, ಹಿಂದುಳಿದವರಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಮೀಸಲಿಡಬೇಕು ಎಂಬುದನ್ನು ಶಿಕ್ಷಣ ಇಲಾಖೆ ಹೆಚ್ಚು ಪ್ರಚಾರ ಮಾಡುತ್ತಿಲ್ಲ. ಶಿಕ್ಷಣ ಸಂಸ್ಥೆಗಳು ಆರ್‌ಟಿಇ ಯಡಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿರಾಕರಿಸುತ್ತಿದ್ದು, ಸರ್ಕಾರ ಆರ್‌ಟಿಇ ಜಾರಿಗೆ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಸೀಟು ನಿರಾಕರಣೆ
`ಶಿಕ್ಷಣ ಸಂಸ್ಥೆಗಳು ಆರ್‌ಟಿಇ ಮೂಲಕ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡರೆ ಸರ್ಕಾರ ಪ್ರತಿ ವಿದ್ಯಾರ್ಥಿಗೆ ್ಙ 11.600 ಶುಲ್ಕ ಪಾವತಿಸುತ್ತದೆ. ಇಷ್ಟಾದರೂ ಸೇವೆಯ ಹೆಸರಿನಲ್ಲಿ ಸರ್ಕಾರದಿಂದ ಉಚಿತ ಮತ್ತು ರಿಯಾಯಿತಿಯಲ್ಲಿ ಹಲವಾರು ಸೌಲಭ್ಯಗಳನ್ನು ಪಡೆದು ಶಾಲೆ ತೆರೆಯುವ ಖಾಸಗಿ ಸಂಸ್ಥೆಗಳು ಸಮಾಜದ ಬಡ ವರ್ಗದ ಮಕ್ಕಳಿಗೆ ಉಚಿತ ಸೀಟು ನಿರಾಕರಿಸುತ್ತಿರುವುದು ವಿಷಾದದ ಸಂಗತಿ' ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದರು.

`ಶಾಲೆಯಲ್ಲೂ ವ್ಯಾಪಾರೀಕರಣ': `ಅಲ್ಪಸಂಖ್ಯಾತರ ಶಾಲೆಗಳು ಅಲ್ಪ ಸಂಖ್ಯಾತರಿಗೆ ಯಾವುದೇ ರಿಯಾಯಿತಿ ನೀಡದೇ ಅಥವಾ ಅವರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸದೇ ಶಿಕ್ಷಣದ ವ್ಯಾಪಾರೀಕರಣದಲ್ಲಿ ನಿರತವಾಗಿವೆ. ಅಲ್ಪಸಂಖ್ಯಾತರ ಶಾಲೆಗಳಲ್ಲಿ ಶೇ 75ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರಬೇಕು ಎಂದು ನಿಗದಿಪಡಿಸಿದ್ದರೂ ಶಾಲೆಗಳು ಅಲ್ಪಸಂಖ್ಯಾತರಿಗೆ ಪ್ರವೇಶ ನಿರಾಕರಿಸುತ್ತಿದ್ದು, ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಸೌಲಭ್ಯ ಕೊರತೆ
`ಆರ್‌ಟಿಇ ಪ್ರಕಾರ ಗುಣಮಟ್ಟದ ಶಿಕ್ಷಣ, ಉತ್ತಮ ಶಿಕ್ಷಕರು, ಆಟದ ಮೈದಾನ, ಶೌಚಾಲಯಗಳು ಮತ್ತು ಇನ್ನಿತರ ಸೌಲಭ್ಯಗಳ ಹೊಂದಿರಬೇಕು ಎಂದು ಕಡ್ಡಾಯವ್ದ್ದಿದರೂ ಅದೆಷ್ಟೋ ಶಾಲೆಗಳಲ್ಲಿ ಆಟದ ಮೈದಾನ, ಸಿಬ್ಬಂದಿ, ಶೌಚಾಲಯ ಇಲ್ಲದೇ ನಡೆಸಲಾಗುತ್ತಿದೆ. ಇಂತಹ ಶಾಲೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಆರ್‌ಟಿಇ ಕಡ್ಡಾಯ ಜಾರಿಗೆ ಆಗ್ರಹಿಸಿ ಎಸ್‌ಐಒ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಅವರಿಗೆ ಮನವಿ ಸಲ್ಲಿಸಿದರು.
ಎಸ್‌ಐಒ ಜಿಲ್ಲಾ ಘಟಕದ ಅಧ್ಯಕ್ಷ ಖಲೀಲ್ ಅಹ್ಮದ್, ಕಾರ್ಯದರ್ಶಿ ಅಬ್ದುಲ್ ಮತೀನ್, ಮಹಮದ್ ಉಸ್ಮಾನ, ಮಹಮ್ಮದ್ ರಫೀಕ್, ಮುಜಿಬರ್ ರೆಹಮಾನ್, ಸಾಧಿಕ್, ಜಾಯಿದ್ ಅಹ್ಮದ್, ಅಬ್ದುಲ್ ಕರೀಂ ಮುದಗಲ್, ಸಮೀರ್, ರಫೀಕ್ ಮುಲ್ಲ, ಮಹಮ್ಮದ್ ಶಾಹೀದ್, ಫಾರುಖ್, ರಫೀಕ್ ನದಾಫ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.