ADVERTISEMENT

‘ಗುಲಾಮಗಿರಿ ಬಿಡಿ; ಕ್ಷಾತ್ರ ತೇಜಸ್ಸು ಪ್ರದರ್ಶಿಸಿ’

ಕನ್ನಡಿಗರಿಗೆ ಶಶಿಕಲಾ ವೀರಯ್ಯಸ್ವಾಮಿ ವಸ್ತ್ರದ ಕಿವಿಮಾತು

ಗಣೇಶ ಚಂದನಶಿವ
Published 3 ಮಾರ್ಚ್ 2014, 5:54 IST
Last Updated 3 ಮಾರ್ಚ್ 2014, 5:54 IST
ಆಲಮೇಲ ಸಮ್ಮೇಳನದ ಅಧ್ಯಕ್ಷೆ ಶಶಿಕಲಾ ವಸ್ತ್ರದ ಮೆರವಣಿಗೆಯಲ್ಲಿ.
ಆಲಮೇಲ ಸಮ್ಮೇಳನದ ಅಧ್ಯಕ್ಷೆ ಶಶಿಕಲಾ ವಸ್ತ್ರದ ಮೆರವಣಿಗೆಯಲ್ಲಿ.   

ವಿಜಾಪುರ: ‘ಇಂಗ್ಲಿಷ್‌ ಭಾಷೆಯ ವ್ಯಾಮೋಹದಿಂದ ನಾವು ಮತ್ತೆ ಗುಲಾ ಮಗಿರಿಯತ್ತ ಸಾಗುತ್ತಿದ್ದೇವೆ. ಕ್ರೌರ್ಯ  ಮತ್ತು ಅಶ್ಲೀಲ ಪ್ರಧಾನ ಧಾರವಾಹಿ, ಸಿನಿಮಾಗಳಿಂದ ಸಾಮರಸ್ಯ ಮರೆಯಾ ಗುತ್ತಿದೆ.

ತಂತ್ರಜ್ಞಾನದ ದುರ್ಬಳಕೆ ಯಿಂದ ಯುವಜನ ದಾರಿ ತಪ್ಪುತ್ತಿದ್ದಾರೆ. ನಮ್ಮ ಈ ಉದಾಸೀನತೆ ಹೀಗೇ ಮುಂದು ವರೆದರೆ ಕನ್ನಡ ಭಾಷೆ–ಸಂಸ್ಕೃತಿಯ ಜೊತೆಗೆ ಈ ನೆಲವನ್ನೂ ನಾವು ಕಳೆದು ಕೊಳ್ಳಬೇಕಾಗುತ್ತದೆ’ ಎಂದು ಹಿರಿಯ ಕವಯಿತ್ರಿ ಶಶಿಕಲಾ ವೀರಯ್ಯಸ್ವಾಮಿ ವಸ್ತ್ರದ ಕಳವಳ ವ್ಯಕ್ತಪಡಿಸಿದರು.

ಸಿಂದಗಿ ತಾಲ್ಲೂಕಿನ ಆಲಮೇದಲ್ಲಿ ಹಮ್ಮಿಕೊಂಡಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ಸಂವೇದನೆ, ಜಾನಪದ ಸಾಹಿತ್ಯದಲ್ಲಿ ಪುರುಷರ ಚಂಚಲತೆಯ ವೈಭವೀಕರಣ, ಪ್ರಸಕ್ತ ಸಮಾಜದ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲಿದ ಅವರು, ‘ಸಾಹಿತಿ ಸಮಾಜದ ದನಿ ಯಾಗಬೇಕು. ವಿರೋಧ ಪಕ್ಷದ ನಾಯ ಕನಂತೆ ಸರ್ಕಾರವನ್ನು ಎಚ್ಚರಿಸುತ್ತಲೇ ಇರಬೇಕು. ಅನ್ಯಾಯದ ವಿರುದ್ಧ ದನಿ ಎತ್ತದ ಸಾಹಿತಿ ಶಿಕ್ಷೆಗೆ ಅರ್ಹ’ ಎಂದು ಚಾಟಿ ಬೀಸಿದರು.

‘ಕನ್ನಡಿಗರು ಕ್ಷಾತ್ರ ತೇಜಸ್ಸು, ಸಂಕಲ್ಪ ಶಕ್ತಿಯೊಂದಿಗೆ ಭಾಷೆ–ಸಂಸ್ಕೃತಿ ರಕ್ಷಣೆಗೆ ಮುಂದಾಗಲೇ ಬೇಕು’ ಎಂದರು.
‘ತನ್ನ ಸ್ವಾರ್ಥ ಮೀರಿ ಸಮಾಜಮುಖಿ ಯಾದವನ ಜೀವನ ಮಾತ್ರ ಅರ್ಥ ಪೂರ್ಣವಾಗುತ್ತದೆ. ಸಾಹಿತ್ಯದ ಅಧ್ಯಯ ನದಿಂದ ಈ ಅರ್ಥಪೂರ್ಣತೆ ಪ್ರಾಪ್ತಿ ಯಾಗುತ್ತದೆ. ಕುವೆಂಪು ಹೇಳುವಂತೆ ಈ ಆಧುನಿಕ ಕಾಲದಲ್ಲಿ ಬುದ್ಧಿವಂತರು ಹೆಚ್ಚಾಗಿ ದೃಹಯವಂತರು ಕಡಿಮೆ ಯಾಗುತ್ತಿದ್ದಾರೆ; ಹೃದಯ   ಹೀನರಾಗುತ್ತಿದ್ದಾರೆ. ಇದು ಅಂಗವೈಕಲ್ಯಕ್ಕಿಂತ ಅಪಾಯಕಾರಿ’ ಎಂದು ವಿಶ್ಲೇಷಿಸಿದರು.

‘ಸಾಮಾಜಿಕ ವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡುವವರು ವ್ರತಭ್ರಷ್ಟರು. ಈ ಬದುಕಿನಲ್ಲಿ ಪ್ರಾಮಾಣಿಕವಾಗಿ, ವೃತ್ತಿಯಲ್ಲಿ ಬದ್ಧತೆ ಇರುವವರು ವ್ರತಸ್ಥರು. ಕಲಬೆರಕೆ ಮಾಡುವ ವ್ಯಾಪಾರಿ, ಸುಳ್ಳು ಸಾಕ್ಷಿಗಳನ್ನು ಒದಗಿ ಸುವ ವಕೀಲ, ಪಾಠ ಮಾಡದೇ      ಮನೆ ಪಾಠಕ್ಕೆ ಕರೆಯುವ ಮತ್ತು ವಿದ್ಯಾರ್ಥಿನಿಯರನ್ನು ಕಾಮದ ಕಣ್ಣಿನಿಂದ ನೋಡುವ ಶಿಕ್ಷಕ. ಬಡವರನ್ನು ಕಿತ್ತುತಿನ್ನುವ, ಸಕಾಲದಲ್ಲಿ ಚಿಕಿತ್ಸೆ ನೀಡದ ವೈದ್ಯ, ಸ್ವಾರ್ಥಿ ರಾಜಕಾರಣಿ ಇವರೆಲ್ಲ ವ್ರತಭ್ರಷ್ಟರು. ಇವರಿಗೆ ಸಾಮಾಜಿಕ ಕಾಳಜಿ, ಕಳಕಳಿ ಇಲ್ಲ’ ಎಂದು ಚುಚ್ಚಿದರು.

‘ಸಾಹಿತ್ಯ ಸಮಾಜಮುಖಿಯಾಗ ಬೇಕು. ಮಾನವೀಯ ಅಂತಃಕರಣ ಇಲ್ಲದ ಸಾಹಿತ್ಯ ರಚನೆ ನಿರುಪಯೋಗಿ. ಸಂಸ್ಕೃತಿ ಉಳಿಯಬೇಕಾದರೆ ಭಾಷೆ ಉಳಿ ಯಬೇಕು. ಅದನ್ನು ನಿತ್ಯದ ವ್ಯವಹಾರ ದಲ್ಲಿ ಬಳಸಬೇಕು. ಅತಿಯಾದ ಮಡಿ ವಂತಿಕೆ ಬೇಡ. ಇಂಗ್ಲಿಷ್‌ ನಮಗೆ ಹೊರ ಜಗತ್ತಿನ ಸಂಪರ್ಕಕ್ಕಾಗಿ, ಕಟಕಿಯಾಗಿ ಇರಲಿ ಹೊರತು,  ಅದೇ ಕನ್ನಡಿಗರ ಸರ್ವಸ್ವ ಆಗುವುದು ಬೇಡ. ನಾವು     ಈ ಗುಲಾಮಿ ಭಾಷೆಯ ಗುಲಾಮರಾಗುವುದು ಬೇಡ’ ಎಂದು ಎಚ್ಚರಿಸಿದರು.

‘ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಬೆಳೆಸಿ ಉಳಿಸುವಲ್ಲಿ ಮಾಧ್ಯಮಗಳ ಪಾತ್ರವೂ ಇದೆ. ಇಂದಿನ ಧಾರವಾಹಿ ಗಳಲ್ಲಿ ಅನೇಕ ಕತೆಗಳು ಅಸಂಬದ್ಧ. ಅಸಹಜ. ಪ್ರತಿ ಕತೆಯಲ್ಲೂ ಮನೆಹಾಳಿ ಯರು–ದ್ವೇಷಿಗಳು–ಕುತಂತ್ರಿಗಳು ಇವರೇ ಇರುವಾಗ ಕೌಟುಂಬಿಕ ಸಾಮ ರಸ್ಯ ಹೇಗೆ ಉಳಿಯುತ್ತದೆ? ಅಶ್ಲೀಲ– ಹಿಂಸೆಯನ್ನು ಪ್ರಧಾನವಾಗಿ ಬಿಂಬಿಸುವ ಸಿನಿಮಾಗಳನ್ನು ವಿರೋಧಿಸಿ. ಅವುಗಳಲ್ಲಿ  ನಟಿಸುವ ಕಲಾವಿದರಿಗೆ ಗೌರವ ಕೊಡ ಬೇಡಿ’ ಎಂದು ಕಿವಿ ಮಾತು ಹೇಳಿದರು.

‘ಗಡಿಭಾಗದ ಶಾಲೆಗಳು, ಅಲ್ಲಿಯ ಜನರಿಗೆ ಎಲ್ಲ ಬಗೆಯ ಸೌಲಭ್ಯ ಕಲ್ಪಿಸಬೇಕು. ಆಲಮೇಲನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು. ಸಿಂದಗಿ ತಾಲ್ಲೂಕನ್ನು ಬರಪೀಡಿತ ಎಂದು ಪರಿಗಣಿಸಿ ಅನುದಾನ ನೀಡಬೇಕು. ಕಬ್ಬು ಬೆಳೆಗೆ ಸೂಕ್ತ ಬೆಲೆ, ಜೋಳ ಬೆಳೆಗಾರ ರಿಗೆ ಪ್ರೋತ್ಸಾಹ ಧನ ಹಾಗೂ ಪಡಿತರ ದಲ್ಲಿ ಜೋಳ ವಿತರಣೆ ಆರಂಭಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಚಂದ್ರಶೇಖರ ಶಿವಾ ಚಾರ್ಯರು, ಶಂಕರಾನಂದ ಸ್ವಾಮೀಜಿ, ಶರಣ ಬಸವ ಸ್ವಾಮೀಜಿ, ಡಾ.ಸಂದೀಪ ಪಾಟೀಲ, ಜಿಪಂ ಅಧ್ಯಕ್ಷೆ ಕಾವ್ಯಾ ದೇಸಾಯಿ, ಸಂಸದ ರಮೇಶ ಜಿಗಜಿಣಗಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಡಾ.ಸಂದೀಪ ಪಾಟೀಲ, ನಿಕಟ ಪೂರ್ವ ಅಧ್ಯಕ್ಷ ಮಹಾಂತ ಗುಲಗಂಜಿ ಇತರರು ಉಪಸ್ಥಿತರಿದ್ದರು. ಸಾಹಿತಿ ಡಾ.ಬಿ.ಆರ್. ನಾಡಗೌಡ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ರಮೇಶ ಭೂಸನೂರ ಸ್ವಾಗತಿ ಸಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಶಿವಶರಣ ಗುಂದಗಿ, ಅಶೋಕ ಹಂಚಲಿ ನಿರೂಪಿಸಿದರು. ಚಂದ್ರಶೇಖರ ದೇವರಡ್ಡಿ ವಂದಿಸಿದರು.

‘ವರ್ಣಾಶ್ರಮ ಪ್ರದರ್ಶಿಸಿದರು...’
‘ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಸಾರೋಟ ದಲ್ಲಿ ಕುಳಿತುಕೊಳ್ಳದೇ ಅಲ್ಲಿ  ವರ್ಣ, ವರ್ಗ ಬೇಧ ಹೊಡೆದು ಹಾಕಿರುವ ಬಸವಾದಿ ಶಿವಶರಣರ ವಚನ ಸಾಹಿತ್ಯ ವನ್ನು ಮೆರೆಸಿ ಆನಂದ ಪಡಬೇಕೆಂಬ ಆಶಯಕ್ಕೆ ವಿರೋಧ ಬಂದಿರುವುದು ತುಂಬಾ ನೋವು ತಂದಿದೆ’ ಎಂದು ಶಶಿಕಲಾ ವೀರಯ್ಯಸ್ವಾಮಿ ವಸ್ತ್ರದ ವಿಷಾದಿಸಿದರು.

‘ಆಲಮೇಲದ ಜಗದೇವ ಮತ್ತು ಮಲ್ಲಿಬೊಮ್ಮ ಇವರು 12ನೇ ಶತಮಾನದಲ್ಲಿ ಶರಣರನ್ನು ರಕ್ಷಿಸಲು ಧರ್ಮಹತ್ಯೆ ಮಾಡಿದವರು ಎಂಬ ಕಾರಣಕ್ಕಾಗಿ ಕ್ರಾಂತಿಕಾರರ ನೆಲದಲ್ಲಿ ನಡೆಯುವ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರು ಮೆರವಣಿಗೆ ಮಾಡಿಕೊಳ್ಳುವದು ಸರಿ ಅಲ್ಲ ಎಂಬುದು ನನ್ನ ಅಭಿಮತ ವಾಗಿತ್ತು.
ಆದರೆ ಇದನ್ನು ವಿರೋಧಿಸಿದವರು ತಮ್ಮ ವರ್ಣಾಶ್ರಮ ವನ್ನು ಪ್ರದರ್ಶಿಸಿದರು’ ಎಂದು ಅಸಮಧಾನ ವ್ಯಕ್ತಪಡಿಸಿದರು.

ಆಲಮೇಲ ತಾಲ್ಲೂಕು: ಸಚಿವರ ಸ್ಪಂದನೆ
‘ಸಿದ್ಧೇಶ್ವರ ಸ್ವಾಮೀಜಿ ಅವರ ಆಶೀರ್ವಾದದಿಂದಲೇ ನಾನು ಸಚಿವನಾಗಿದ್ದೇನೆ. ನಮ್ಮ ಭೂಮಿಗೆ ಬೊಗಸೆ ನೀರು ಕೊಟ್ಟರೆ ಇದು ಕರ್ನಾಟಕದ ಕ್ಯಾಲಿಫೋರ್ನಿಯಾ ಆಗುತ್ತದೆ ಎಂಬ ಅವರ ಆಶಯಕ್ಕೆ ತಕ್ಕಂತೆ ಜಿಲ್ಲೆಯ ಸಮಗ್ರ ನೀರಾವರಿಗೆ ಪಣತೊಟ್ಟು ಕೆಲಸ ಮಾಡುತ್ತಿದ್ದೇನೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಆಲ ಮೇಲ ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬ ಬೇಡಿ ಕೆಗೆ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಸಿಂದಗಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಶಿಫಾರಸು ಮಾಡಲಾಗಿದೆ’ ಎಂದರು. ‘ವಿಜಾಪುರದಲ್ಲಿ ಕಸಾಪ ಭವನ ನಿರ್ಮಾಣಕ್ಕೆ ರಿಯಾಯಿತಿ ದರದಲ್ಲಿ ನಿವೇಶನ ಒದಗಿಸಿ ಕಾಮಗಾರಿ ಆರಂಭಿಸಲಾಗುವುದು. ಕಸಾಪ ಶತಮಾನೋ ತ್ಸವಕ್ಕೆ ಮತ್ತೆ ₨5 ಕೋಟಿ ಅನುದಾನ ನೀಡುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ’ ಎಂದರು.

ಕಸಾಪದಲ್ಲಿ ಮಹಿಳಾ ಮೀಸಲು
‘ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕಗಳಲ್ಲಿರುವ ಪ್ರಧಾನ ಕಾರ್ಯದರ್ಶಿ ಗಳ ಎರಡು ಹುದ್ದೆಗಳಲ್ಲಿ ಒಂದನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪರಿಷತ್‌ನ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗು ವುದು’ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷೆ ಶಶಿಕಲಾ ವಸ್ತ್ರದ ಅವರು ಪ್ರಜಾವಾಣಿಗೆ ನೀಡಿದ್ದ ಸಂದರ್ಶನದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್‌ ಪುರುಷ ಪ್ರಧಾನ’ ಎಂದು ಬೇಸರ ವ್ಯಕ್ತಪಡಿಸಿದ್ದನ್ನು ಪ್ರಸ್ತಾಪಿಸಿದ ಬಾದವಾಡಗಿ, ‘ಈ ತಿದ್ದುಪಡಿ ತರುವ ಮೂಲಕ ಮಹಿಳೆಯರಿಗೂ ಜಿಲ್ಲಾ ಘಟಕಗಳಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದರು.

‘ಪರಿಷತ್‌ನಲ್ಲಿ ಲಿಂಗತಾರತಮ್ಯ ಇಲ್ಲ. ಕಸಾಪ ಕೇಂದ್ರ ಪರಿಷತ್‌ ಚುನಾವಣೆಯಲ್ಲಿ ಶಶಿಕಲಾ ಅವರೇ ಸ್ಪರ್ಧಿಸಲಿ’ ಎಂದು ಆಹ್ವಾನ ನೀಡಿದರು.

2.07 ಲಕ್ಷ ಸದಸ್ಯರನ್ನು ಹೊಂದಿರುವ ಕಸಾಪ ದೇಶದ ದೊಡ್ಡ ಸಂಸ್ಥೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಗೋಷ್ಠಿ , ತಾಲ್ಲೂಕು, ಘಟಕಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಡೀ ವರ್ಷ ಶತಮಾನೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.