ADVERTISEMENT

‘ದೇಶ ಪರ್ಯಟನೆ ಬಿಟ್ಟು ಉದ್ಯೋಗ ಮಾಡಿ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 7:32 IST
Last Updated 1 ಜನವರಿ 2014, 7:32 IST

ಬಾಗಲಕೋಟೆ: ಲೈಂಗಿಕ ಅಲ್ಪಸಂಖ್ಯಾತರು ದೇಶ ಪರ್ಯಟನೆ ಮಾಡುವುದನ್ನು ಬಿಟ್ಟು ಉದ್ಯೋಗ ದಲ್ಲಿ ತೊಡಗಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬಸವಂತಪ್ಪ ಮೇಟಿ ಸಲಹೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆಎಸ್‌ಎಪಿಎಸ್‌ ಹಾಗೂ ಮಿಲನ ಸಂಘದ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಿಲನೋತ್ಸವ’ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಲೈಂಗಿಕ ಅಲ್ಪಸಂಖ್ಯಾತರು ಕೀಳರಿಮೆ ತೆಗೆದುಹಾಕಿ, ಸರ್ಕಾರ ದಿಂದ ಸಿಗುವ ಸೌಲಭ್ಯ ಗಳನ್ನು ಪಡೆದುಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದರು. ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ಕೀಳಾಗಿ ಕಾಣದೇ ಪ್ರೀತಿ, ವಿಶ್ವಾಸದಿಂದ ನೋಡುವ ಮೂಲಕ ಗೌರವಿಸಬೇಕು ಎಂದು ಹೇಳಿದರು.

ಎಚ್‌.ವೈ.ಮೇಟಿ ಅವರು ಶಾಸಕರಾಗಿ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲೈಂಗಿಕ ಅಲ್ಪಸಂಖ್ಯಾತರ ಯಾವುದೇ ಬೇಡಿಕೆಗಳಿದ್ದರೂ ಈಡೇರಿಸ ಲಾಗುವುದು, ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌.ಎಚ್‌.ಪಾಟೀಲ ಮಾತನಾಡಿ, ರಾಜ್ಯ ಸರ್ಕಾರವು ಲೈಂಗಿಕ ಅಲ್ಪಸಂಖ್ಯಾತರಿಗೆ ಸ್ವಾವಲಂಭಿ ಜೀವನ ನಡೆಸಲು ಅನುಕೂಲವಾಗುವಂತೆ ‘ಮೈತ್ರಿ’ ಯೋಜನೆಯಡಿ ₨ 500 ಮಾಸಾಶನ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಮಹಿಳಾ ಅಭಿವೃದ್ಧಿ ನಿಗಮದ ಇನ್‌ಸ್ಪೆಕ್ಟರ್‌ ದಾಕ್ಷಾಯಿಣಿ ಮಾತನಾಡಿ, ಸ್ವ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 51 ಲೈಂಗಿಕ ಅಲ್ಪಸಂಖ್ಯಾತರಿಗೆ ತಲಾ ₨ 20 ಸಾವಿರ ಸಹಾಯಧನ ಮಂಜೂರಾಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಸಹಾಯಧನದ ಚೆಕ್‌ ವಿತರಿಸಲಾಯಿತು.

ಮಿಲನ ಸಂಘದ ಅಧ್ಯಕ್ಷ ಸಮೀರ ಎಂ. ಕರ್ಜಗಿ, ಡಾ.ಬಸವರೆಡ್ಡಿ ಬಾಡಗಿ, ಸೋಮು ಪಾಟೀಲ, ಹಣಮಂತ ಹೊನ್ನಾಕಟ್ಟಿ, ಮಲ್ಲಿಕಾರ್ಜುನ ಮೇಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲೈಂಗಿಕ ಅಲ್ಪಸಂಖ್ಯಾತರಾದ ಹುಚ್ಚಪ್ಪ ಹಡಪದ ಪ್ರಾರ್ಥಿಸಿದರು. ಸಿದ್ದಪ್ಪ ಭೈರಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣ ಸ್ವಾಗತ ನೃತ್ಯ ಪ್ರದರ್ಶಿಸಿದರು. ಶಂಕರ ಖಂಡೋಬಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.