ADVERTISEMENT

ಬಾದಾಮಿಯಲ್ಲಿ ಜಾನುವಾರು ಜಾತ್ರೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 6:50 IST
Last Updated 10 ಜನವರಿ 2018, 6:50 IST
ಬಾದಾಮಿ ಎಪಿಎಂಸಿ ಮಾರುಕಟ್ಟೆಯಲ್ಲಿ ಜಾನುವಾರು ಜಾತ್ರೆಯ ನೋಟ
ಬಾದಾಮಿ ಎಪಿಎಂಸಿ ಮಾರುಕಟ್ಟೆಯಲ್ಲಿ ಜಾನುವಾರು ಜಾತ್ರೆಯ ನೋಟ   

ಬಾದಾಮಿ: ಇಲ್ಲಿನ ಎಪಿಎಂಸಿ ಮಾರು ಕಟ್ಟೆಯಲ್ಲಿ ಜಾನುವಾರು ಜಾತ್ರೆಯ ನಿಮಿತ್ತ ರೈತರು ತಾವು ಸಾಕಿದ ಹೋರಿ, ಎತ್ತು, ಮತ್ತು ಆಕಳುಗಳ ಮಾರಾಟ ಮತ್ತು ಪ್ರದರ್ಶನಕ್ಕಾಗಿ ತಂದಿದ್ದಾರೆ.

ಬನಶಂಕರಿದೇವಿ ಜಾತ್ರೆಯ ಅಂಗವಾಗಿ ದೇವಿಯ ರಥದ ಕಳಸ ಇಳಿಸಿದ ಮಾರನೆಯ ದಿನ ಇಲ್ಲಿನ ಎಪಿಎಂಸಿ ಆವರಣದಲ್ಲಿ ಜಾನುವಾರು ಜಾತ್ರೆಯು ಎಪಿಎಂಸಿ, ಕೃಷಿ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಯ ಸಹಯೋಗದಲ್ಲಿ ನಡೆಯುತ್ತದೆ.

ಎಪಿಎಂಸಿ ಅಧ್ಯಕ್ಷ ಕುಬೇರಗೌಡ ಪಾಟೀಲ ಜಾನುವಾರು ಜಾತ್ರೆಗೆ ಚಾಲನೆ ನೀಡಿದರು. ಬಾಗಲಕೋಟೆ, ಗದಗ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ ಜಿಲ್ಲೆಗಳ ಗ್ರಾಮೀಣ ಪ್ರದೇಶದ ರೈತರು ಜಾನುವಾರು ಜಾತ್ರೆಗೆ ತಾವು ಸಾಕಿದ ಜಾನುವಾರುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ತಂದಿರುತ್ತಾರೆ.

ADVERTISEMENT

‘ಈ ವರ್ಸ ಮಳಿ ಕಡಿಮೀ ಆದ್ರೂ ರೈತ್ರು ಹೋರಿ ಮತ್ತು ಎತ್ತುಗಳನ್ನು ಚೋಲೋ ಮೇಸ್ಯಾರ್ರಿ. ರೈತರ ಕೈಯ್ಯಾಗ ರೊಕ್ಕ ಇಲ್ಲರಿ. ಹಂಗಾಗಿ ವ್ಯಾಪಾರ ಕಡಿಮೆ ಐತ್ರಿ’ ಎಂದು ಹುನಗುಂದ ತಾಲ್ಲೂಕಿನ ಹಿರೇಮಾಗಿ ಗ್ರಾಮದ ರೈತ ಮಲ್ಲಪ್ಪ ಹೊಸೂರ ಹೇಳಿದರು.

ಎತ್ತುಗಳ ಮೇಲೆ ಪ್ರೀತಿ ಕಾಳಜಿ ಇರುವ ಕೆಲವು ರೈತರು ತಮ್ಮ ಎತ್ತುಗಳಿಗೆ ಬಿಸಿಲು ಬೀಳಬಾರದು ಎಂದು ಶಾಮಿಯಾನ್‌ ಹಾಕಿದ್ದಾರೆ. ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದ ರೈತ ಹನುಮಂತಗೌಡ ಗೌಡರ ತನ್ನ ಜೋಡೆತ್ತುಗಳ ಮಾರಾಟಕ್ಕೆ ₹ 1.75 ಲಕ್ಷ ಮೌಲ್ಯವನ್ನು
ಹೇಳುತ್ತಿದ್ದರು.

‘ಜೋಡಿ ಎತ್ತುಗಳಿಗೆ ಜಾತ್ರೆಯಲ್ಲಿ 40 ಸಾವಿರದಿಂದ ಎರಡು ಲಕ್ಷದ ವರೆಗೆ ಮಾರಾಟ ನಡೆದಿವೆ’ಎಂದು ಢಾಣಕಶಿರೂರ ಗ್ರಾಮದ ರೈತ ಯಲ್ಲಪ್ಪ ಮುದೇನಗುಡಿ ಹೇಳಿದರು. ಜಮಖಂಡಿ ತಾಲ್ಲೂಕಿನ ಗೋಠೆ ಗ್ರಾಮದ ಮಾರುತಿ ಸಾಳುಂಕೆ ಚಕ್ಕಡಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿದ್ದರು. ಪ್ರತಿವರ್ಷ ಜಾತ್ರೆಯಲ್ಲಿ 25ರಿಂದ 30 ಚಕ್ಕಡಿಗಳ ಮಾರಾಟವಾಗುತ್ತವೆ ಎಂದು ತಿಳಿಸಿದರು.

ಎತ್ತುಗಳ ಅಲಂಕಾರದ ವಸ್ತುಗಳ ಅಂಗಡಿಗಳಲ್ಲಿ ಬಾರಕೋಲು, ಹಗ್ಗದ ಹಿತ್ತಾಳೆಸರ, ಗಂಟೆಸರ, ಗೆಜ್ಜೆ , ಮುಗದಾನ ಮತ್ತಿತರ ವಸ್ತುಗಳನ್ನು ರೈತರು ಖರೀದಿಸುತ್ತಿರುವುದು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.