ADVERTISEMENT

‘ಧರ್ಮದ ಮೆರವಣಿಗೆಗಿಂತ ಆಚರಣೆ ಮುಖ್ಯ’

ಬ್ರಹ್ಮಾನಂದ ಜಯಂತ್ಯುತ್ಸವ: ‘ಹೀಗಿರಲಿ ನಮ್ಮ ಬದುಕು’ ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 6:31 IST
Last Updated 15 ಜನವರಿ 2018, 6:31 IST
ರಬಕವಿಯ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶಿವಯೋಗಿಗಳ 150ನೇ ಜಯಂತ್ಯುತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ವಚನಪ್ರಭೆ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿದರು
ರಬಕವಿಯ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶಿವಯೋಗಿಗಳ 150ನೇ ಜಯಂತ್ಯುತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ವಚನಪ್ರಭೆ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿದರು   

ರಬಕವಿ ಬನಹಟ್ಟಿ: ‘ಧರ್ಮ ಜೀವಂತವಾಗಿದೆ. ಆದರೆ ಇಂದು ಧರ್ಮದ ಮೆರವಣಿಗೆ ಮಾಡುತ್ತಿದ್ದೇವೆ. ಮೆರವಣಿಗೆ ಬೇಡ. ಆಚರಣೆ ಮುಖ್ಯ. ಅನುಷ್ಠಾನ ಅಗತ್ಯ. ಶರಣರು ಹೇಳಿದ ಅಷ್ಠಾವರಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವ ಮಹಾದೇವನಾಗುತ್ತಾನೆ’ ಎಂದು ಅಣ್ಣಿಗೇರಿಯ ಡಾ.ಎ.ಸಿ.ವಾಲಿ ನುಡಿದರು.

ಶನಿವಾರ ಸ್ಥಳೀಯ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಜಯಂತ್ಯುತ್ಸವ ಹಾಗೂ ಮಕರ ಸಂಕ್ರಮಣದ ನಿಮಿತ್ತ ಹಮ್ಮಿಕೊಂಡ ವಚನಪ್ರಭೆ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ವಚನಗಳನ್ನು ಚಿಂತನೆ ಮಾಡುವುದರಿಂದ ಬದುಕು ಬಂಗಾರವಾಗುತ್ತದೆ. ತಂದೆ, ತಾಯಿ ಮತ್ತು ಮಕ್ಕಳ ಮಧ್ಯದಲ್ಲಿ ಸಂಬಂಧಗಳಲ್ಲಿ ಸಾಮರಸ್ಯದ ಕೊರತೆ ಉಂಟಾಗುತ್ತಿದೆ. ಉತ್ತಮ ಕಾಯಕ, ಆಹಾರ ಮತ್ತು ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ. ಜೀವನದ ಕೊನೆಯ ತನಕ ಗುರುವಿನ ಅನುಗ್ರಹ ಮುಖ್ಯ’ ಎಂದರು.

ADVERTISEMENT

ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ‘ಪುಸ್ತಕಗಳು ನಮ್ಮ ಜೀವನಕ್ಕೆ ಆದರ್ಶವನ್ನು ತಂದುಕೊಡುತ್ತವೆ. ಬ್ರಹ್ಮಾನಂದ ಶಿವ ಯೋಗಿಗಳು ಜಗತ್ತಿಗೆ ಜ್ಞಾನಸುಧೆ ಹರಿಸಿದ ಮಹಾನ್‌ ತಪಸ್ವಿ’ ಎಂದರು.

ಗುರುಸಿದ್ಧೇಶ್ವರ ಸ್ವಾಮೀಜಿ ರಚಿಸಿದ ‘ಹೀಗಿರಲಿ ನಮ್ಮ ಬದುಕು’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಬಸವಲಿಂಗ ಶಿವಾಚಾರ್ಯರ ಸ್ವಾಮೀಜಿ, ಸುಣಧೋಳಿಯ ಜಡಿಸಿದ್ಧೇಶ್ವರ ವಿರಕ್ತ ಮಠದ ಶಿವಾನಂದ ಸ್ವಾಮೀಜಿ, ಗುಡುಗುಂಟಿಯ ಸದಾನಂದ ಶಿವಾಚಾರ್ಯ  ಮತ್ತು ಬೆಳ್ಳೇರಿಯ ಬಸವಾನಂದ ಶರಣರು, ವಿನೋದ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಶಿವಯೋಗಿ ಸುರಕೋಡ, ಈರಣ್ಣ ಅಳವುಂಡಿ ಇದ್ದರು. ಅಶೋಕ ಬೀಳಗಿ ಪ್ರಾರ್ಥಿಸಿದರು. ಭಾಗ್ಯಶ್ರೀ, ರಾಜಶ್ರೀ ನೃತ್ಯ ಪ್ರದರ್ಶನ ಮಾಡಿದರು. ಗುರುಸಿದ್ಧೇಶ್ವರ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಿರೀಶ ಮುತ್ತೂರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.