ADVERTISEMENT

ತಾಲ್ಲೂಕು ಕಚೇರಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 6:58 IST
Last Updated 17 ಜನವರಿ 2018, 6:58 IST
ಹುನಗುಂದ ಪಟ್ಟಣದಲ್ಲಿ ಮಂಗಳವಾರ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕ ನೇತೃತ್ವದಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು
ಹುನಗುಂದ ಪಟ್ಟಣದಲ್ಲಿ ಮಂಗಳವಾರ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕ ನೇತೃತ್ವದಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು   

ಹುನಗುಂದ: ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕ ನೇತೃತ್ವದಲ್ಲಿ ಕಡಲೆಗೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯುವುದು ಸೇರಿದಂತೆ 14 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಡಾ.ಸ್ವಾಮಿನಾಥ ಆಯೋಗದ ವರದಿ ಜಾರಿ, ಬೆಳೆಹಾನಿ ಪರಿಹಾರ ಹಣ ಬಿಡುಗಡೆ, ರಾಷ್ಟ್ರೀಕೃತ ಬ್ಯಾಂಕಗಳ ಸಾಲಮನ್ನಾ, ಹನಿ ನೀರಾವರಿ ಸಮರ್ಪಕ ನಿರ್ವಹಣೆ, ಕಾಲುವೆ ದುರಸ್ತಿ, ತಾಲ್ಲೂಕಿನ 35 ಹಳ್ಳಿಗಳಿಗೆ ನೀರಾವರಿ ಯೋಜನೆ ವಿಸ್ತರಣೆ, ಕೊಪ್ಪಳ ನೀರಾವರಿ ಯೋಜನೆ ಆರಂಭಿಸುವುದು ಸೇರಿದಂತೆ ಮತ್ತಿತರ ಬೇಡಿಕೆಗಳಿಗೆ ಒತ್ತಾಯಿಸಿ 20ಕ್ಕೂ ಅಧಿಕ ಚಕ್ಕಡಿ ಬಂಡಿಯಲ್ಲಿ ಆಗಮಿಸಿ ಪ್ರತಿಭಟಿಸಿದರು.

ರೈತ ಮುಖಂಡ ಮಲ್ಲನಗೌಡ ತುಂಬದ ಮಾತನಾಡಿ, ‘ಫಸಲ್ ಭೀಮಾ ವಿಮಾ ಯೋಜನೆಗೆ ₹ 82 ಕೋಟಿ ಬಿಡುಗಡೆಯಾಗಿದೆ. ಆದರೆ ರೈತರಿಗೆ ವಿತರಣೆಯಾಗುತ್ತಿಲ್ಲ. ಕಡಲೆಗೆ ₹ 3700 ದರಕ್ಕೆ ಖರೀದಿಸುತ್ತಿರುವುದರಿಂದ ತುಂಬಾ ತೊಂದರೆಯಾಗಿದೆ. ಕನಿಷ್ಠ ₹ 8 ಸಾವಿರ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಸ್ಥಳಕ್ಕೆ ಬಂದ ಶಾಸಕ ವಿಜಯಾಂದ ಕಾಶಪ್ಪನವರ ಮನವಿ ಸ್ವೀಕರಿಸಿ, ‘ಸರ್ಕಾರ ರೈತ ಪರವಾಗಿದ್ದು, ಮುಖ್ಯಮಂತ್ರಿ ಜೊತೆ ಮಾತನಾಡಿ ಕಡಲೆಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಲಾಗು ವುದು. ಹನಿ ನೀರಾವರಿ ಕಾಲುವೆ ದುರಸ್ತಿ, ಪೈಪ್ ಲೈನ್ ದುರಸ್ತಿ ಮಾಡು ವಂತೆ ಅಧಿಕಾರಿಗಳಿಗೆ ಸೂಚನೆ ನೀಡು ತ್ತೇನೆ. ಹತ್ತು ದಿನಗಳಲ್ಲಿ ರೈತರ ಬೇಡಿಕೆ ಈಡೇರಿಕೆಗೆ ಪ್ರಯತ್ನಸಲಾಗುವುದು’ ಎಂದರು.

ವಿಜಯ ಮಹಾಂತೇಶ ವೃತ್ತದಿಂದ 20ಕ್ಕೂ ಅಧಿಕ ಚಕ್ಕಡಿಯೊದಿಗೆ ಪ್ರತಿಭಟನೆಯಲ್ಲಿ ಬಂದ ರೈತರು, ತಹಶೀಲ್ದಾರ್ ಕಚೇರಿ ಎದುರು ಬಂಡಿ ನಿಲ್ಲಿಸಿ, ಬೇಡಿಕೆ ಈಡೇರಿಕೆಗಾಗಿ ಪ್ರತಿಭಟಿಸಿದರು. ನಂತರ ತಹಶೀಲ್ದಾರ್ ಸುಭಾಸ್ ಸಂಪಗಾವಿ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಶಶಿಕಾಂತಗೌಡ ಬಂಡರಗಲ್ಲ, ಸಂಗಣ್ಣ ಸಾಲಮನಿ, ಗುರು ಗಾಣಗೇರ, ರಸೂಲಸಾಬ್ ತಹಶೀಲ್ದಾರ, ತಿವಾರಿ ಕಾಕ, ನಹಾಲಿಂಗಪ್ಪ ಅವಾರಿ, ಬಸನಗೌಡ ಪೈಲ, ಮಲ್ಲಪ್ಪ ಹೊಸೂರ, ಮಹಾಂತಪ್ಪ ವಾಲಿಕಾರ, ಕೃಷ್ಣಾ ಜಾಲಿಹಾಳ, ಬಸನಗೌಡ ದಾದ್ಮಿ, ಸಂಗಪ್ಪ ಕೂಡ್ಲೆಪ್ಪನವರ, ಮಲ್ಲಪ್ಪ ಪಲ್ಲೇದ, ಕಿಡಿಯಪ್ಪ ಹೂಲಗೇರಿ, ಪರಸಪ್ಪ ಮಜ್ಜಗಿ, ಸಾಂತಪ್ಪ ಹೊಸಮನಿ, ಬಸವರಾಜ ಕೋಳಿ, ಮಹೇಶ ಬೆಳ್ಳಿಹಾಳ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.