ADVERTISEMENT

ಸಚಿವ ಹೆಗಡೆ ಉಚ್ಚಾಟನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 10:09 IST
Last Updated 24 ಜನವರಿ 2018, 10:09 IST

ಬಾಗಲಕೋಟೆ: ಸಂವಿಧಾನ ಹಾಗೂ ದಲಿತ ವಿರೋಧಿ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಂಸತ್‌ನಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಸಂಘಟನೆಯ ಕಾರ್ಯಕರ್ತರು, ಜಿಲ್ಲಾಡಳಿತ ಭವನದ ಹೊರಗಡೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಮಾತನಾಡಿ, ‘ದಲಿತ ವಿರೋಧಿ ಹೇಳಿಕೆ ನೀಡುವ ಮೂಲಕ ಸಚಿವ ಹೆಗಡೆ ದಲಿತ ಸಮುದಾಯಗಳಿಗೆ ಅವಮಾನ ಮಾಡುತ್ತಿದ್ದಾರೆ. ಯುವಕರಲ್ಲಿ ಭಾವನಾತ್ಮಕವಾಗಿ ವಿಷಬೀಜ ಬಿತ್ತುವ ಮೂಲಕ ರಾಷ್ಟ್ರೀಯ ಭಾವೈಕ್ಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಪ್ರಜಾತಂತ್ರದ ಕನಿಷ್ಠ ಅರಿವಿಲ್ಲದೇ ಅನಾಗರಿಕವಾಗಿ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬಿಜೆಪಿ ಹೆಗಡೆ ಅವರನ್ನು ಮುಂದೆ ಬಿಟ್ಟು ರಾಜಕೀಯ ಲಾಭಕ್ಕೋಸ್ಕರ ಕೋಮು ದಳ್ಳುರಿ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಎಲ್ಲ ಧರ್ಮ, ವರ್ಗದ ಜನರು ಭ್ರಾತೃತ್ವದ ಮೂಲಕ ಬದುಕುತ್ತಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನಿಸುತ್ತಿರುವ ಹೆಗಡೆ ಅವರನ್ನು ದೇಶದಿಂದ ಹೊರ ಹಾಕಬೇಕು. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಅಂಬೇಡ್ಕರ್‌ ಹಾಗೂ ದಲಿತರಿಗೆ ಬಿಜೆಪಿ ಅವಮಾನ ಮಾಡುತ್ತಿದೆ. ಆ ಪಕ್ಷದಲ್ಲಿರುವ ದಲಿತ ನಾಯಕರು ಸ್ವಾಭಿಮಾನದ ರಾಜಕಾರಣ ಮಾಡಬೇಕಿದ್ದರೆ ಕೂಡಲೇ ಆ ಪಕ್ಷ ತೊರೆಯಬೇಕು’ ಎಂದು ಆಗ್ರಹಿಸಿದರು.

ಮುಖಂಡ ನಾಗರಾಜ ಹದ್ಲಿ ಮಾತನಾಡಿ, ‘ನಿಜವಾದ ಹಿಂದುತ್ವ ಕಾಂಗ್ರೆಸ್ ಪಕ್ಷದಲ್ಲಿದೆ. ನಾವು ಕೂಡಾ ಹಿಂದೂಗಳು. ಆದರೆ ನಾವು ವಿವೇಕಾನಂದ, ಗಾಂಧೀಜಿ ಹಾಗೂ ಅಂಬೇಡ್ಕರ್‌ ಅವರ ಹಿಂದುತ್ವವನ್ನು ಒಪ್ಪುತ್ತೇವೆ. ಹೊರತು ಈ ಹೆಗಡೆ, ಅಮಿತ್‌ ಶಾ ಅವರ ಹಿಂದುತ್ವವನ್ನಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಎಂ.ಬಿ.ಸೌದಾಗರ, ರಾಜು ಮನ್ನಿಕೇರಿ, ಎನ್‌.ಬಿ.ಗಸ್ತಿ, ಅಬುಶಮಾ ಖಾಜಿ, ದಶರಥ ಚಿಕ್ಕಸಂಶಿ, ಫಕೀರಪ್ಪ ಮಾದರ, ಸಂಜೀವ ಗಸ್ತಿ, ದುರ್ಗಪ್ಪ ಕಾಳನ್ನವರ, ಶಬ್ಬೀರ್ ನದಾಫ್, ಹನುಮಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.