ADVERTISEMENT

ಬಿಜೆಪಿ ಸದಸ್ಯರಿಂದ ಸಭಾತ್ಯಾಗ

ನಗರಸಭೆ ಸಾಮಾನ್ಯಸಭೆ: ಮತ್ತೆ ಪ್ರತಿಧ್ವನಿಸಿದ ಯುನಿಟ್–1 ಹಸ್ತಾಂತರ ವಿಚಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 6:34 IST
Last Updated 26 ಜನವರಿ 2018, 6:34 IST

ಬಾಗಲಕೋಟೆ: ನವನಗರದ ಯುನಿಟ್–1ರ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ, ಅದರ ಅಭಿವೃದ್ಧಿಗೆ ಬಂದ ಅನುದಾನವನ್ನು ನಗರಸಭೆ ಆಡಳಿತದ ಗಮನಕ್ಕೆ ತಂದು ಕಾಮಗಾರಿ ಕೈಗೊಳ್ಳುವಂತೆ ಪಕ್ಷಬೇಧ ಮರೆತು ಆಗ್ರಹಿಸಿದರು. ಈ ಬಗ್ಗೆ ಠರಾವು ಪಾಸು ಮಾಡವಂತೆ ಬಿಜೆಪಿ ಸದಸ್ಯರ ಮಾಡಿದ ಆಗ್ರಹಕ್ಕೆ ಪೌರಾಯುಕ್ತರು ಸೊಪ್ಪು ಹಾಕಲಿಲ್ಲ. ಇದರಿಂದ ಆಕ್ರೋಶಗೊಂಡ ಸದಸ್ಯರು ಪೌರಾಯುಕ್ತರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಸಭಾತ್ಯಾಗ ಮಾಡಿದರು.

ಯುನಿಟ್–1 ಹಸ್ತಾಂತರಕ್ಕೆ ಕಳೆದ ಸಭೆಯಲ್ಲಿ ಪಟ್ಟು ಹಿಡಿದು ಸಭಾತ್ಯಾಗ ಮಾಡಿದ್ದ ಬಿಜೆಪಿ ಸದಸ್ಯರು, ಇಂದು ಕೂಡ ಅದೇ ವಿಚಾರದಲ್ಲಿ ನಗರಸಭೆ ಆಯುಕ್ತರಿಂದ ಸ್ಪಷ್ಟನೆ ಬಯಸಿದರು. ಹಸ್ತಾಂತರ ಪ್ರಕ್ರಿಯೆ ಬಗ್ಗೆ ಸಂಪೂರ್ಣ ವಿವರ ಕೊಡಿ, ಅರೆಬರೆ ಸ್ಥಳಾಂತರವಾದರೆ ಅದನ್ನು ಹೇಗೆ ಸ್ವೀಕರಿಸುತ್ತೀರಿ. ಆಡಳಿತ ಮಂಡಳಿ ಗಮನಕ್ಕೆ ತಾರದೇ ಕದ್ದು ಮುಚ್ಚಿ ತರಾತುರಿಯಲ್ಲಿ ಹಸ್ತಾಂತರ ಮಾಡಿದ ಉದ್ದೇಶವೇನು ಎಂದು ಪ್ರಶ್ನಿಸಿದರು.

ಸಂತ್ರಸ್ತರ ಗೋಳನ್ನು ವಿವರಿಸಿ ಹಸ್ತಾಂತರಕ್ಕೆ ನಮ್ಮ ವಿರೋಧವಿದೆ. ಆದರೂ ಆ ಪ್ರಕ್ರಿಯೆ ಕೈಗೊಂಡಿದ್ದೀರಿ. ನಗರಸಭೆಗೆ ಬಿಟಿಡಿಎ ನೀಡಿದ ₨134 ಕೋಟಿ ವೆಚ್ಚದ ಕಾಮಗಾರಿಗೆ ನಗರಸಭೆ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಸ್ತಾಂತರ ಪ್ರಕ್ರಿಯೆ ಬಗ್ಗೆ ವಿವರಿಸಿದ ಪೌರಾಯುಕ್ತ ಗಣಪತಿ ಪಾಟೀಲ, 'ಕಟ್ಟಡ ಪರವಾನಗಿ, ಎನ್.ಓ.ಸಿ. ಪಡೆಯುವುದು ಸೇರಿದಂತೆ ಇನ್ನೂ ಕೆಲವು ಕಾರ್ಯಗಳಿಗೆ ಬಿಟಿಡಿಎಯನ್ನೇ ಸಂಪರ್ಕಿಸಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ‘ಅದು ಹೇಗೆ ಸಾಧ್ಯ ಹಸ್ತಾಂತರ ಪೂರ್ಣಗೊಳ್ಳದೇ ಹೇಗೆ ಒಪ್ಪಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನವನಗರದ ಯುನಿಟ್1 ಹಸ್ತಾಂತರಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ' ಎಂದರು.

ಈ ವೇಳೆ ಸದಸ್ಯ ಹಣಮಂತ ರಾಕುಂಪಿ ಮಾತನಾಡಿ, ‘ಈ ಹಿಂದೆ ಯಾವುದೇ ಸೌಲಭ್ಯಗಳಿಲ್ಲದ ಕೆಎಚ್‌ಬಿ ಕಾಲೊನಿಯನ್ನು ನಗರಸಭೆಗೆ ಹಸ್ತಾಂತರಿಸಿಕೊಳ್ಳಲಿಲ್ಲವೆ? ನಂತರವೇ ಆ ಪ್ರದೇಶಕ್ಕೆ ನಗರಸಭೆಯಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಯಿತು. ಇದು ಆಡಳಿತ–ವಿರೋಧ ಪಕ್ಷಗಳ ನಡುವಿನ ಮಾತಿನ ಏಟು ಎದಿರೇಟು ಹೆಚ್ಚಳಗೊಳ್ಳಲು ಕಾರಣವಾಯಿತು.

ನವನಗರದ ಯುನಿಟ್ ಹಸ್ತಾಂತರ ಬೇಡ ಎಂದು ಬಿಜೆಪಿ ಸದಸ್ಯರ ಆಗ್ರಹಕ್ಕೆ ಮಣಿಯದ ಪೌರಾಯುಕ್ತರು, ‘ನಾವು ರಾಜ್ಯ ಸರ್ಕಾರದ ಆದೇಶ ಪಾಲನೆ ಮಾಡಿದ್ದೇವೆ. ಬಿಟಿಡಿಎಯಿಂದ ಕೊಟ್ಟ ₨134 ಕೋಟಿ ಅನುದಾನದಲ್ಲಿ ಕೈಗೊಳ್ಳಬೇಕಾದ ಕಾಮಗಾರಿ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳುತ್ತದೆ. ಅದಕ್ಕೆ ಕ್ರಿಯಾ ಯೋಜನೆ ನಾವು ಸಿದ್ದಪಡಿಸಬೇಕು ಎಂದರು. ಅದಕ್ಕೆ ಒಪ್ಪದ ಬಿಜೆಪಿ ಸದಸ್ಯರು, ಆಡಳಿತ ಮಂಡಳಿ ಇರುವಾಗ ಅದರ ಗಮನಕ್ಕೂ ತರದೇ, ಒಪ್ಪಿಗೆ ಪಡೆಯದೇ ಕಾಮಗಾರಿಗಳನ್ನು ಸರ್ಕಾರವೇ ಕೈಗೊಳ್ಳುತ್ತದೆ ಎಂದರೆ ಎಷ್ಟು ಸರಿ ಎಂದು ಪ್ರಶ್ನಿಸಿದರು.ಸದಸ್ಯರ ಗಮನಕ್ಕೆ ತಂದು ಕಾಮಗಾರಿ ಕೈಗೊಳ್ಳಬೇಕು. ಆ ಬಗ್ಗೆ ಠರಾವು ಪಾಸು ಮಾಡಲಿ ಎಂದು ಪಟ್ಟು ಹಿಡಿದಾಗ ಪೌರಾಯುಕ್ತರು ಒಪ್ಪಲಿಲ್ಲ. ಈಗಾಗಲೇ ಕ್ರೀಯಾ ಯೋಜನೆ ಸಿದ್ದಗೊಂಡಿದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದರು. ಕಾಮಗಾರಿ ಬದಲಾವಣೆಗೆ ಸಭೆಯ ಒಪ್ಪಿಗೆ ಪಡೆದು ಸರ್ಕಾರಕ್ಕೆ ಕಳುಹಿಸಿ ಎಂದು ಹೇಳಿದ ಸದಸ್ಯರು ಹಾಗೂ ಪೌರಾಯುಕ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಪೌರಾಯುಕ್ತರ ನಡೆ ವಿರೋಧಿಸಿದ ಅಧ್ಯಕ್ಷ ದ್ಯಾವಪ್ಪ ರಾಕುಂಪಿ ನೇತೃತ್ವದಲ್ಲಿ ಸದಸ್ಯರು ಸಭಾತ್ಯಾಗ ಮಾಡಿದರು.

ಕಾನೂನು ತೊಡಕು: ಸ್ಪಷ್ಟನೆ ಕೇಳಿದ ಬಳ್ಳಾರಿ

ನವನಗರದ ಮೊದಲ ಯುನಿಟ್ ಹಸ್ತಾಂತರದ ನಂತರ ಎದುರಾಗುವ ಕಾನೂನು ತೊಡಕುಗಳ ಬಗ್ಗೆ ಸದಸ್ಯ ಗೋವಿಂದ ಬಳ್ಳಾರಿ ಪೌರಾಯುಕ್ತರಿಂದ ಸ್ಪಷ್ಟನೆ ಕೇಳಿದರು. ಇದು ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ನವನಗರದಲ್ಲಿಕಟ್ಟಿದ ಕಟ್ಟಡಗಳನ್ನು ನಗರಸಭೆ ಆಸ್ತಿ ಖಾತೆ ದಸ್ತಾವೇಜಿನಲ್ಲಿ ಯಾವ ಕಾಯ್ದೆಯಡಿ ದಾಖಲಿಸಬೇಕು ಎಂದು ಬಳ್ಳಾರಿ ಪ್ರಶ್ನಿಸಿದರು.

ಕಟ್ಟಡಗಳು ಇರುವ ಸ್ಥಿತಿಯಲ್ಲಿ ಅಥವಾ ಯಾವ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ, ಅದೇ ಸ್ಥಿತಿಯಲ್ಲಿ ಅದನ್ನು ದಾಖಲಿಸಲು ಬರುತ್ತದೆಯೇ . ಅಲ್ಲಿ ನಗರಸಭೆಯಿಂದ ಕಟ್ಟಡ ಪರವಾನಿಗೆ ಪಡೆದಿಲ್ಲ. ಇದು ಪುರಸಭೆ ಕಾಯ್ದೆಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೇಯೇ ಅಥವಾ ಪುರಸಭೆ ಕಾಯ್ದೆಗಳ ಪ್ರಕಾರ ಮುಂದುವರೆಸಲು ಅವಕಾಶಗಳಿವೆ ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದರು.

‘ನವನಗರದಲ್ಲಿರುವ ಕಟ್ಟಡಗಳಿಗೆ ಕಳೆದ 1997 ರಿಂದ ಈವರೆಗೆ ತೆರಿಗೆ ವಿಧಿಸಿಲ್ಲ, ಸದ್ಯ ಈ ಕಟ್ಟಡಗಳ ಮೇಲೆ ಯಾವ ರೀತಿ ಹಾಗೂ ಯಾವ ವರ್ಷದಿಂದ ತೆರಿಗೆ ವಿಧಿಸಲು ಬರುತ್ತದೆ, ಇನ್ನು ಖಾಲಿ ನಿವೇಶನಗಳಿಗೆ ತೆರಿಗೆಯನ್ನು ಯಾವ ವರ್ಷದಿಂದ ಆಕರಣೆ ಮಾಡುತ್ತೀರಿ’ ಎಂದು ಪ್ರಶ್ನಿಸಿದ ಬಳ್ಳಾರಿ, ‘ಹಸ್ತಾಂತರದ ನಂತರ ಕಟ್ಟಿದ ಕಟ್ಟಡಗಳಿಗೆ ಸರ್ಕಾರದ ಆದೇಶದಂತೆ 10 ವರ್ಷ ಕಾಲ ತೆರಿಗೆ ವಿನಾಯಿತಿ ನೀಡಲು ಅವಕಾಶ ಇದೇಯೇ’ ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಗಣಪತಿ ಪಾಟೀಲ ‘ಹಸ್ತಾಂತರದಿಂದ ಯಾವುದೇ ತಾಂತ್ರಿಕ ಸಮಸ್ಯೆ ಆಗುವುದಿಲ್ಲ. ಸದ್ಯಕ್ಕೆ ಕಟ್ಟಡಗಳಿಗೆ ಬಿಟಿಡಿಎ ಅನುಮತಿ ನೀಡಲಿದೆ. ಸಿಟಿ ಸರ್ವೆಯಲ್ಲಿ ಆಸ್ತಿಗಳ ದಾಖಲೆಗಳ ಪ್ರಕ್ರಿಯೆ ಮುಗಿದ ಬಳಿಕ ನಗರಸಭೆ ಎನ್ಒಸಿ ಸೇರಿದಂತೆ ಇತರ ದಾಖಲೆಗಳ ವಿತರಣೆ ಕಾರ್ಯ ಆರಂಭಿಸಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.