ADVERTISEMENT

ಶಿಲಾವಶೇಷಗಳ ಪತ್ತೆ: ಕಾಮಗಾರಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 9:00 IST
Last Updated 28 ಜನವರಿ 2018, 9:00 IST
ಒಳಚರಂಡಿ ಕಾಮಗಾರಿಯಲ್ಲಿ ಭೂಮಿಯನ್ನು ಅಗೆದಾಗ ದೊರೆತ ಶಿಲಾ ಅವಶೇಷಗಳು
ಒಳಚರಂಡಿ ಕಾಮಗಾರಿಯಲ್ಲಿ ಭೂಮಿಯನ್ನು ಅಗೆದಾಗ ದೊರೆತ ಶಿಲಾ ಅವಶೇಷಗಳು   

ಬಾದಾಮಿ: ತಟಕೋಟೆ ಗ್ರಾಮದಿಂದ ಒಳಚರಂಡಿ ಕಾಮಗಾರಿ ಕೈಗೊಂಡಾಗ ಅಗಸ್ತ್ಯತೀರ್ಥ ಹೊಂಡ ಮತ್ತು ಮ್ಯೂಸಿಯಂ ಸಮೀಪ ಭೂಮಿಯ ಅಗೆತದಲ್ಲಿ ಕೆಲವೊಂದು ಶಿಲಾವಶೇಷಗಳು ಪತ್ತೆಯಾಗಿವೆ. ಕೇಂದ್ರ ಸರ್ಕಾರದ ಹೃದಯ ಯೋಜನೆಯಲ್ಲಿ ತಟಕೋಟೆ ಗ್ರಾಮದಿಂದ ಒಳಚರಂಡಿ ಕಾಮಗಾರಿಗೆ ಭೂಮಿಯನ್ನು ಅಗೆದಾಗ ಪತ್ತೆಯಾಗಿವೆ.

ಮ್ಯುಜಿಯಂ ಎದುರಿನ ರಸ್ತೆಯಲ್ಲಿ ಅಂದಾಜು 10 ಅಡಿ ಭೂಮಿಯನ್ನು ಅಗೆಯಲಾಗಿದೆ. ಇಲ್ಲಿ ಕೆಲವೊಂದು ಕಡೆ ಭೂಮಿಯ ಒಳಗೆ ಏಳು ಮೆಟ್ಟಿಲು, ಕೆಲವು ಕಡೆ ಮೂರು ಚಿಕ್ಕ ಮೆಟ್ಟಿಲು ಕಾಣುತ್ತಿವೆ. ಕಂಬದ ಮೇಲಿನ ಶಿಲೆಯ ಬೋದುಗಳು ಕೂಡಾ ಲಭ್ಯವಾಗಿವೆ.

ಭೂಮಿಯಲ್ಲಿ ಚಾಲುಕ್ಯ ಕಾಲದ ಅರಮನೆ ಇದ್ದಿರಬಹುದೇ ಇಲ್ಲವೇ ಒಳಗೆ ಯಾವುದಾದರೂ ದೇವಾಲಯ ಇದ್ದಿಬಹುದೇ ಎಂದು ಜನರು ಗುಂಪು ಗುಂಪಾಗಿ ಬಂದು ವೀಕ್ಷಿಸಿ ಚರ್ಚಿಸತೊಡಗಿದ್ದಾರೆ. ಇದುವರೆಗೂ ಚಾಲುಕ್ಯರ ಅರಮನೆ ಶೋಧನೆಯಾಗಿಲ್ಲ. ಭೂಮಿಯಲ್ಲಿ ದೊರಕಿದ ಅವಶೇಷಗಳ ಬಗ್ಗೆ ಇತಿಹಾಸ ಸಂಶೋಧಕರು ಅಧ್ಯಯನ ಮಾಡಬೇಕಿದೆ.

ADVERTISEMENT

ವಿಜಯನಗರ ಸಾಮ್ರಾಜ್ಯದಲ್ಲಿ ಕೆಲವೆಡೆ ಉತ್ಖನನ ಮಾಡಲಾಯಿತು. ಆದರೆ ಚಾಲುಕ್ಯರ ಪರಿಸರದಲ್ಲಿ ಇದುವರೆಗೂ ಸರಿಯಾಗಿ ಉತ್ಖನನವಾಗಿಲ್ಲ. ಉತ್ತರದ ಕೋಟೆಯ ಭಾಗದಲ್ಲಿ ಜನವಸತಿ ಇದ್ದಿರಬಹುದು ಎಂದು ಕೆಲವು ಇತಿಹಾಸ ಸಂಶೋಧಕರು ಹೇಳುತ್ತಾರೆ.

ಕೇಂದ್ರ ಸರ್ಕಾರದ ಹೃದಯ ಯೋಜನೆಯಲ್ಲಿ ₹51 ಲಕ್ಷ ವೆಚ್ಚದಲ್ಲಿ ತಟಕೋಟೆ ಗ್ರಾಮದ ಮನೆಗಳಿಗೆ ಒಳಚರಂಡಿ ಕಾಮಗಾರಿಯನ್ನು ಕೈಗೊಂಡಿದೆ. ತಟಕೋಟೆ ಗ್ರಾಮದ ಚರಂಡಿ ನೀರು ಅಗಸ್ತ್ಯತೀರ್ಥ ಹೊಂಡಕ್ಕೆ ಬಂದು ಕಲುಷಿತವಾಗುವುದನ್ನು ತಡೆಯಲು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಭಾರತೀಯ ಪುರಾತತ್ವ ಇಲಾಖೆ ಮೊದಲು ಇದಕ್ಕೆ ಅನುಮತಿ ಕೊಟ್ಟಿದ್ದಿಲ್ಲ. ಈಗ ಅನುಮತಿ ಕೊಟ್ಟಿದ್ದರಿಂದ ಕಾಮಗಾರಿ ಆರಂಭವಾಗಿತ್ತು. ಈಗ ಮತ್ತೆ ಶಿಲಾವಶೇಷಗಳು ದೊರಕಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆಂದು ತಿಳಿದಿದೆ. ಈ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ಪ್ರಮೋದ ಬಿ. ಅವರನ್ನು ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.