ADVERTISEMENT

‘ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಹೊಣೆ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 9:01 IST
Last Updated 2 ಫೆಬ್ರುವರಿ 2018, 9:01 IST
ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದಲ್ಲಿ ನಡೆದ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಚಿವ  ಆರ್.ಬಿ.ತಿಮ್ಮಾಪುರ, ಶಾಸಕ ಗೋವಿಂದ ಕಾರಜೋಳ ಹಾಗೂ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದಲ್ಲಿ ನಡೆದ 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಚಿವ ಆರ್.ಬಿ.ತಿಮ್ಮಾಪುರ, ಶಾಸಕ ಗೋವಿಂದ ಕಾರಜೋಳ ಹಾಗೂ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು   

ಮುಧೋಳ: ‘ಕನ್ನಡ ಭಾಷೆ, ನೆಲ, ಜಲ ರಕ್ಷಣೆಗಾಗಿ ಅನೇಕ ಮಹನೀಯರು ತ್ಯಾಗ, ಬಲಿದಾನ ಮಾಡಿ, ಪ್ರಾತಃಸ್ಮರಣೀಯ ಎನಿಸಿದ್ದಾರೆ. ಆ ಸಂಸ್ಕೃತಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ಕೈಜೋಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ತಾಲ್ಲೂಕಿನ ಕುಳಲಿ ಗ್ರಾಮದಲ್ಲಿ ಗುರುವಾರ ನಡೆದ ಮುಧೋಳ ತಾಲ್ಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಗಾಂಧಿ ಗ್ರಾಮ ಪ್ರಶಸ್ತಿಗೆ ಪಾತ್ರವಾಗಿರುವ ಕುಳಲಿಯಲ್ಲಿ ನಡೆಯುತ್ತಿರುವ ಈ ಸಮ್ಮೇಳನಕ್ಕೆ ವೈಯಕ್ತಿಕವಾಗಿ ₹ 50 ಸಾವಿರ ಅನುದಾನ ನೀಡುವುದಾಗಿ ಹೇಳಿದರು.

‘ಗ್ರಾಮದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ನೆರವು ಕೊಡಿಸುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿಯು ಕಾಲೇಜು ಮಂಜೂರಾತಿಗಾಗಿ ಪ್ರಯತ್ನಿಸಲಾಗುವುದು. ಮಹಾದಾಯಿ ವಿವಾದ ಪರಿಹಾರಕ್ಕಾಗಿ ಎಲ್ಲರೂ ಪಕ್ಷ ಬೇಧ ಮರೆತು ಪ್ರಯತ್ನಿಸಬೇಕು. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದ ಇತ್ಯರ್ಥಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ನುಡಿಹಬ್ಬದಲ್ಲಿ ಯಾವುದೇ ರಾಜಕೀಯ ಬೆರೆಸದೇ ಶಿಷ್ಟಾಚಾರ ಯಥಾವತ್ತಾಗಿ ಪಾಲಿಸಿ ಸಾಹಿತಿಗಳಿಗೆ ಹೆಚ್ಚಿನ ಗೌರವಾದರ ದೊರೆಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಸರ್ವಾಧ್ಯಕ್ಷ ಡಾ.ಸಿದ್ದು ದಿವಾಣ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ, ನಿಕಟಪೂರ್ವ ಅಧ್ಯಕ್ಷ ಬಿ.ಪಿ.ಹಿರೇಸೋಮಣ್ಣವರ ಮಾತನಾಡಿದರು. ಕುಳಲಿಯ ಶ್ರೀ ನಂಜುಂಡ ಶಿವಾಚಾರ್ಯರು, ಮರೇಗುದ್ದಿಯ ನಿರುಪಾಧೀಶ್ವರ ಸ್ವಾಮೀಜಿ ಹಾಗೂ ಲೋಕಾಪುರದ ಬಸವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ ಸ್ವಾಗತಿಸಿದರು.

ತಾ.ಪಂ. ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಜಿಪಂ ಸದಸ್ಯರಾದ ಭೀಮನಗೌಡ ಪಾಟೀಲ, ಕವಿತಾ ತಿಮ್ಮಾಪೂರ, ಗ್ರಾಪಂ ಅಧ್ಯಕ್ಷ ಚನ್ನಬಸು ಮರನೂರ, ಉಪಾಧ್ಯಕ್ಷೆ ಲಕ್ಕವ್ವ ಹಿರೇಕುರುಬರ, ಪಿಕೆಪಿಎಸ್ ಅಧ್ಯಕ್ಷ ಬಿ.ಡಿ.ಬಡಿಗುಡದಾರ, ಉಪಾಧ್ಯಕ್ಷ ಫಕೀರಪ್ಪ ಬನಾಜಗೋಳ, ಸಾವರಿನ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಿವಕುಮಾರ ಮಲಘಾಣ, ಗುರುರಾಜ ಹೊಸಕೋಟಿ, ಡಾ.ಶಿವಾನಂದ ಕುಬಸದ, ಕ್ರಿಷ್ಣಪ್ಪ ಕನಕರೆಡ್ಡಿ, ಡಾ. ಎ.ಆರ್.ಬೆಳಗಲಿ, ಸತೀಶ ಬಂಡಿವಡ್ಡರ, ಎನ್.ಆರ್.ಐಹೊಳ್ಳಿ, ಬಿ.ಡಿ.ತಳವಾರ, ನಟಿ ಪಂಕಜಾ ರವಿಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.