ADVERTISEMENT

0.30 ಟಿಎಂಸಿ ಅಡಿ ನೀರು ಬಳಕೆಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 8:47 IST
Last Updated 10 ಫೆಬ್ರುವರಿ 2018, 8:47 IST

ಬಾಗಲಕೋಟೆ: ಜನ–ಜಾನುವಾರುಗಳು ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಜಲಾಶಯದ ಹಿನ್ನೀರ ಪ್ರದೇಶದಿಂದ 0.30 ಟಿಎಂಸಿ ಅಡಿ ನೀರನ್ನು ಎತ್ತಿ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಹರಿಸಲು ಕೃಷ್ಣಾ ಭಾಗ್ಯ ಜಲನಿಗಮ (ಕೆಬಿಜೆಎನ್‌ಎಲ್) ಫೆಬ್ರುವರಿ 8ರಂದು ಅನುಮತಿ ನೀಡಿದೆ.

ಬೇಸಿಗೆಯಲ್ಲಿ ಬಳಕೆಗೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾ ಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಯಾಗಬಹುದು ಎಂಬ ಕಾರಣಕ್ಕೆ ಹಿನ್ನೀರ ಪ್ರದೇಶದಿಂದ ನೀರು ಎತ್ತಿ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ತುಂಬಿಸುವುದನ್ನು ಫೆ. 6ರಂದು ಸ್ಥಗಿತಗೊಳಿಸಲಾಗಿತ್ತು.

ಚಿಕ್ಕಪಡಸಲಗಿ ಬ್ಯಾರೇಜ್ ವ್ಯಾಪ್ತಿಯ ರೈತರು ಹಾಗೂ ಜನಪ್ರತಿನಿಧಿಗಳು ಮಾಡಿರುವ ಮನವಿಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಲಮಟ್ಟಿ ಹಿನ್ನೀರ ಪ್ರದೇಶದಿಂದ 0.30 ಟಿಎಂಸಿ ಅಡಿ ನೀರನ್ನು ಎತ್ತಿ ಬ್ಯಾರೇಜ್‌ಗೆ ತುಂಬಿಸಿದ ತಕ್ಷಣ ಪ್ರಕ್ರಿಯೆ ನಿಲ್ಲಿಸಲಾಗುವುದು ಎಂದು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ADVERTISEMENT

'ಚಿಕ್ಕಪಡಸಲಗಿ ಬ್ಯಾರೇಜ್‌ನ ತಡೆಗೋಡೆಯ ಮಟ್ಟ 517.50 ಮೀಟರ್‌ ಇದ್ದು, 4.30 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಆದರೆ ಈಗ ಬ್ಯಾರೇಜ್‌ನಲ್ಲಿ 517.32 ಮೀಟರ್‌ವರೆಗೆ ನೀರು ಸಂಗ್ರಹವಾಗಿದ್ದು, 3.825 ಟಿಎಂಸಿ ಅಡಿ ನೀರು ಇದೆ. ಬ್ಯಾರೇಜ್‌ಗೆ ಜನವರಿ 14ರಿಂದ ಪಂಪ್‌ಗಳ ಮೂಲಕ ಹಿನ್ನೀರು ಎತ್ತಿ ಹಾಕಲಾಗುತ್ತಿದೆ. ಜನವರಿ 31ರ ವೇಳೆಗೆ 1.38 ಟಿಎಂಸಿ ಅಡಿ ನೀರು ಎತ್ತಲಾಗಿದೆ. ಅನುಮತಿಗಿಂತ ಈಗಾಗಲೇ 0.27 ಟಿಎಂಸಿ ಅಡಿ ಹೆಚ್ಚಿನ ನೀರು ಬ್ಯಾರೇಜ್‌ಗೆ ಹರಿಸಲಾಗಿದೆ' ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.