ADVERTISEMENT

72 ಕೋಟಿ ಹಿಂಗಾರು ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 6:20 IST
Last Updated 16 ಫೆಬ್ರುವರಿ 2012, 6:20 IST

ಬಾಗಲಕೋಟೆ: ಜಿಲ್ಲೆಯಲ್ಲಿ ಹಿಂಗಾರು ಮಳೆ ಸರಿಯಾಗಿ ಆಗದ ಕಾರಣ ರೂ.72.22 ಕೋಟಿ ಬೆಳೆಹಾನಿ ಸಂಭವಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂಗಾರು ಮಳೆ ಸರಿಯಾಗಿ ಆಗದ ಕಾರಣ ಶೇ. 50ರಿಂದ 60ರಷ್ಟು ಗೋದಿ, ಕಡಲೆ, ಸೂರ್ಯಕಾಂತಿ ಬೆಳೆ ಹಾನಿಗೊಳಗಾಗಿದೆ ಎಂದರು.

ಜಿಲ್ಲೆಯಲ್ಲಿ 2.77 ಸಾವಿರ ಹೆಕ್ಟೇರ್ ಮಳೆ ಆಶ್ರಿತ ಮತ್ತು 1.7 ಸಾವಿರ ಹೆಕ್ಟರ್ ಒಣಭೂಮಿ ಸೇರಿದಂತೆ ಒಟ್ಟು 3 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಹಿಂಗಾರು ಬಿತ್ತನೆ ಮಾಡಲಾಗಿತ್ತು ಎಂದು ಹೇಳಿದರು.

ಸಂಪೂರ್ಣ ಬರ: ಬಾಗಲಕೋಟೆ ತಾಲ್ಲೂಕನ್ನು ಬರಪೀಡಿತ ತಾಲ್ಲೂಕನ್ನಾಗಿ ಸರ್ಕಾರ ಘೋಷಣೆ ಮಾಡಿದೆ, ಈಗಾಗಲೇ ಐದು ತಾಲ್ಲೂಕನ್ನು ಮಾತ್ರ ಮಾಡಲಾಗಿತ್ತು, ಇದೀಗ ಸಂಪೂರ್ಣ ಜಿಲ್ಲೆಯನ್ನೇ ಬರಪೀಡಿತ ಎಂದು ಪರಿಗಣಿಸಲಾಗಿದೆ ಎಂದರು.

ಕೃಷಿ ವಿಮೆ: 2011-12ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 1,25, 770 ರೈತರು ರೂ.123 ಕೋಟಿ ಮೊತ್ತದ ಬೆಳೆ ವಿಮೆ ಮಾಡಿಸಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯ 75 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇದ್ದು, ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದರು.

ಮೇವು, ಕುಡಿಯುವ ನೀರು ಮತ್ತು ಉದ್ಯೋಗವನ್ನು ಜನತೆಗೆ ಸಮರ್ಪಕವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಮೇವಿನ ಕೊರತೆ ನೀಗಿಸಲು ಹುನಗುಂದ, ಬಾದಾಮಿ ಮತ್ತು ಜಮಖಂಡಿ ತಾಲ್ಲೂಕಿಗೆ ತಲಾ 7 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ 7090 ವಿವಿಧ ಬರ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ ಈಗಾಗಲೇ 1400 ಕಾಮಗಾರಿ ಪ್ರಾರಂಭವಾಗಿದೆ, ಉಳಿದ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೊಯ್ನಾದಿಂದ ನೀರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾದರೆ ಮಹಾರಾಷ್ಟ್ರದ ಕೊಯ್ನಾ ಆಣೆಕಟ್ಟೆಯಿಂದ ನೀರು ಖರೀದಿಸಲು ರಾಜ್ಯ ಸರ್ಕಾರ ಸಿದ್ಧವಿದೆ, ಹಿಡಕಲ್ ಜಲಾಶಯದಲ್ಲಿ ಇದೇ 22ರ ವರೆಗೆ ನೀರನ್ನು ಹೊರ ಬಿಡಲಾಗುವುದು, ಬಳಿಕ 5 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಸಂಗ್ರಹಿಸಿಡಲಾಗುವುದು ಎಂದರು.

ರೈತರ ಆತ್ಮಹತ್ಯೆ ನಡೆದಿಲ್ಲ: ರಾಜ್ಯದಲ್ಲಿ ಬರಗಾಲದಿಂದ ರೈತರ ಆತ್ಮಹತ್ಯೆ ನಡೆದಿಲ್ಲ, ಕಡಿಮೆ ಬಡ್ಡಿ ದರದಲ್ಲಿ  ರೈತರಿಗೆ ಸಾಲ, ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಈರುಳ್ಳಿ ಮತ್ತು ತೊಗರಿಗೆ ಬೆಂಬಲ ಬೆಲೆ ನೀಡಿ ರಾಜ್ಯ ಸರ್ಕಾರವೇ ಖರೀದಿಸುತ್ತಿರುವುದರಿಂದ ರೈತರು ಸಂಕಷ್ಟದಿಂದ ಪಾರಾಗಿದ್ದಾರೆ ಎಂದರು.
ಕೇಂದ್ರ ಸರ್ಕಾರದ ನೀತಿಯಿಂದ ರೈತರಿಗೆ ಅನ್ಯಾಯವಾಗಿದೆ, ರಾಜ್ಯದಲ್ಲಿ ರೈತರು ಸಂತೋಷವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಉತ್ಸವ ರದ್ದು: ಬರದ ಹಿನ್ನೆಲೆಯಲ್ಲಿ ಈ ವರ್ಷ ನಡೆಯಬೇಕಿದ್ದ ಚಾಲುಕ್ಯ ಉತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ ಗದ್ದಿಗೌಡರ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಸಿಇಒ ಎಸ್.ಜಿ.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.