ಬಾದಾಮಿ: ಸಮೀಪದ ಧಾರ್ಮಿಕ ಕ್ಷೇತ್ರ ಮಹಾಕೂಟೇಶ್ವರ ದೇವಾಲಯದಿಂದ ಶಿವಯೋಗಮಂದಿರ ರಸ್ತೆಯಲ್ಲಿ ಹೋಗುವಾಗ ಎಡಕ್ಕೆ ತೆಂಗು, ಅಡಕೆ, ನಿಂಬೆ, ಮೆಣಸು, ದಾಲ್ಚಿನ್ನಿ ಗಿಡಗಳು ಗುಂಪು ಗುಂಪಾಗಿ ಹಚ್ಚ ಹಸುರಿನಿಂದ ಕಂಗೊಳಿಸುತ್ತವೆ.
ತೆಂಗಿನ ಮರದ ಜೊತೆಗೆ ಅಡಕೆ ಮರಗಳು ಸೊಂಪಾಗಿ ಬೆಳೆದಿವೆ. ಅಡಕೆ ಮರಗಳನ್ನು ಸಾಮಾನ್ಯವಾಗಿ ಪಶ್ಚಿಮ ಘಟ್ಟ ಹಾಗೂ ಮಲೆನಾಡಿನಲ್ಲಿ ಬೆಳೆಯುವುದು ವಾಡಿಕೆ. ಆದರೆ ಬಯಲು ಸೀಮೆಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪರಿಸರದಲ್ಲಿ ಬೆಳೆಯುವುದು ಸವಾಲಿನ ಸಂಗತಿಯೇ. ಆದರೆ ಈ ಸವಾಲು ಎದುರಿಸಿ ಲಾಭ ಗಳಿಕೆಯಲ್ಲಿ ಮುಂದಾಗಿದ್ದಾರೆ ಮುಂದಾದವರು ರೈತ ಶಿವಯ್ಯ ಮುಚಖಂಡಿ.
ತಮ್ಮ ಒಂದುವರೆ ಎಕರೆ ಜಮೀನದಲ್ಲಿ 80 ತೆಂಗಿನಮರ, 50 ಅಡಿಕೆ ಮರ, 30 ನಿಂಬೆ ಗಿಡ, ಹಲಸು ಜೊತೆಗೆ ಕಾಳುಮೆಣಸು, ದಾಲಚಿನ್ನಿ ಬೆಳೆಯನ್ನು ಬೆಳೆಯಲಾಗಿದೆ. ಒಂದೊಂದು ಸಮಯಕ್ಕೆ ಒಂದೊಂದು ಫಸಲು ಬರುತ್ತಿದ್ದು, ಕುಂಟುಬಕ್ಕೆ ಆರ್ಥಿಕ ಸಹಾಯವಾಗಿದೆ. ಮಹಾಕೂಟೇಶ್ವರ ದೇವಾಲಯದ ಆವರಣದಲ್ಲಿದ್ದ ಪುಷ್ಕರಣಿಯ ಕಾಲುವೆಯಿಂದ ನಿರಂತರವಾಗಿ ನೀರು ಬರುವುದು. ಕಾಲುವೆ ನೀರಿನಿಂದ ನೂರಾರು ರೈತರು ನೀರಾವರಿ ಮಾಡಿದ್ದಾರೆ. ಇದೇ ನೀರನ್ನು ಬಳಸಿ ರೈತ ಶಿವಯ್ಯ ಸಮೃದ್ಧ ತೋಟ ಮಾಡದ್ದಾರೆ.
‘ತೆಂಗಿನ ಮರದ ಜೊತೆಗೆ ಅಡಿಕೆ ಏಕೆ ಬೆಳೆಬಾರದು ಎಂದು ಆಲೋಚಿಸಿ ಅರಸಿಕೆರೆಯಿಂದ ಗಿಡಗಳನ್ನು ತಂದು ನೆಡಲಾಯಿತು. ನಾಲ್ಕು ವರ್ಷಕ್ಕೆ ಫಲ ಕೊಡಲು ಆರಂಭಿಸಿದವು. ನಾಲ್ಕು ವರ್ಷ ಸಾವಯವ ಗೊಬ್ಬರದಿಂದ ಬೆಳೆಸಿದಾಗ ಉತ್ತಮ ಫಸಲು ಆರಂಭವಾಗಿದೆ. 20 ವರ್ಷದ ಅಡಿಕೆ ಮರಗಳಿವೆ. ತೆಂಗಿನ ಮರದಿಂದ ಪ್ರತಿವರ್ಷ ಲಕ್ಷಕ್ಕೂ ಅಧಿಕ ಆದಾಯವಿದೆ. ಅಡಕೆ ಮರದಿಂದ ₹60 ಸಾವಿರ ಮತ್ತು ನಿಂಬೆಯಿಂದ ಪ್ರತಿ ವಾರ ಅಂದಾಜು ₹10 ಸಾವಿರ ಆದಾಯ ಬರುತ್ತದೆ’ ಎಂದು ಶಿವಯ್ಯ ಅವರು ತಿಳಿಸಿದರು.
‘ಪ್ರತಿ ವರ್ಷ ಎಕರೆಗೆ ₹10 ಸಾವಿರ ವೆಚ್ಚ ಬರುವುದು. ಮನೆಯಲ್ಲಿನ ಜಾನುವಾರು ಗೊಬ್ಬರ ಮತ್ತು ಎರೆಹುಳು ಗೊಬ್ಬರ ಹಾಕುತ್ತೇವೆ. ಚೊಳಚಗುಡ್ಡ ಗ್ರಾಮದವರು ಪ್ರತಿ ವರ್ಷ ಅಡಿಕೆ ತೆಗೆದುಕೊಂಡು ಹೋಗುತ್ತಾರೆ. ಅಡಿಕೆ ಗಿಡಕ್ಕೆ ಕೋತಿಯ ಕಾಟದಿಂದ ಈ ಬಾರಿ ಇಳುವರಿ ಕಡಿಮೆಯಾಗಿದೆ. ಈ ಬಾರಿ ಬೀಜದಿಂದ ನಾವೇ ಈಗ ನಮ್ಮ ತೋಟದಲ್ಲಿ ಅಡಿಕೆ ಮರದ ಸಸಿಗಳನ್ನು ಮಾಡಿದ್ದೇವೆ. ಮತ್ತೆ ನೂರು ಅಡಕೆ ಮರಗಳನ್ನು ನೆಡುವ ಯೋಚನೆಯಿದೆ’ ಎಂದು ವಿವರಿಸಿದರು.
ಪುಷ್ಕರಣಿ ನೀರಿನಿಂದ ನಮಗೆ ವಿದ್ಯುತ್ತಿನ ಬಳಕೆ ಇಲ್ಲ. ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಬರುತ್ತಿದೆ. ಒಂದುವರೆ ಎಕರೆ ತೋಟದಲ್ಲಿ ಬರುವ ಆದಾಯದಿಂದ ಐದು ಕುಟುಂಬಗಳ ನಿರ್ವಹಣೆಯಾಗುತ್ತಿದೆಶಿವಯ್ಯ ಮುಚಖಂಡಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.