ಬಾದಾಮಿ: ‘12ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ ಮೊದಲಾದ ವಚನಕಾರರಲ್ಲಿ ಅಲ್ಲಮನು ಇವರಿಗಿಂತ ಭಿನ್ನವಾಗಿ ನಿಲ್ಲುತ್ತಾನೆ. ಆತ್ಮಸಾಕ್ಷಾತ್ಕಾರದ ವಚನಗಳ ಮೂಲಕ ದೇಶದ ಒಬ್ಬ ಶ್ರೇಷ್ಟ ದಾರ್ಶನಿಕನಾಗಿ ಕಾಣಿಸಿಕೊಳ್ಳುತ್ತಾನೆ’ ಎಂದು ಕಲ್ಲಹಳ್ಳಿ ಅಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ ಹೇಳಿದರು.
ಇಲ್ಲಿನ ಶಾಖಾ ಶಿವಯೋಗಮಂದಿರ ಮಠದ ಆವರಣದಲ್ಲಿ ಗುರುವಾರ ವಿಶ್ವಚೇತನ ಆಶ್ರಯದಲ್ಲಿ ಹಮ್ಮಿಕೊಂಡ ‘ಅಲ್ಲಮನ ಅಧ್ಯಾತ್ಮ’ ಕುರಿತು ಅವರು ಉಪನ್ಯಾಸ ನೀಡಿದರು.
‘ಆಕಾರದ ಮೂಲಕ ನಿರಾಕಾರ ಹಂತವನ್ನು ತಲುಪುವ ಅಲ್ಲಮನ ವಚನಗಳ ನಡೆಯು ಎಲ್ಲರನ್ನೂ ಎಲ್ಲ ಕಾಲಕ್ಕೂ ಚಕಿತರನ್ನಾಗಿಸುತ್ತದೆ. ದೇವ, ಗುರು, ಮತ್ತು ಭಕ್ತನನ್ನು ಪ್ರತ್ಯೇಕವಾಗಿ ಕಾಣುವ ಅಲ್ಲಮ ಬಯಲಿನ ತತ್ವದ ಮುಖಾಂತರ ಯಾವ ಘಟನೆಯೂ ಸಂಭವಿಸಿಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ವಚನಗಳ ಮೂಲಕ ಪ್ರತಿಪಾದಿಸಿದ್ದಾನೆ’ ಎಂದರು.
‘ಇಡೀ ಶರಣ ಸಂಪ್ರದಾಯದಲ್ಲಿ ಮಾಯೆಯ ಭಯ ಎಲ್ಲರನ್ನು ಆವರಿಸಿದ್ದರೂ ಅಲ್ಲಮ ಅದರಿಂದ ಹೊರಗುಳಿದನು. ಈ ಬ್ರಹ್ಮಾಂಡದಲ್ಲಿ ಇದು ನಡೆಯಬಹುದಾದ ಘಟನೆ ಎಂಬ ಸರಳತೆಯನ್ನು ಅರಿತು ಹೃದಯದ ಗೂಡಿನ ಭಾವಾರ್ಥದ ಗುಹೆ ಎಂಬ ಶಬ್ದವನ್ನು ಅರಿತು ತನ್ನನ್ನು ತಾನು ಗೆದ್ದಾಗ ದೇವನಾಗಬಲ್ಲ’ ಎಂಬ ಮಾತನ್ನು ಗುಹೇಶ್ವರ ನಾಮಾಂಕಿತ ಮುಖಾಂತರ ವಿವರಿಸಿದರು.
ಇಡೀ ಉಪನ್ಯಾಸದುದ್ದಕ್ಕೂ ಅಲ್ಲಮಪ್ರಭುವಿನ ಪೂರಕವಾದ ವಚನಗಳ ನಿಲುವುಗಳನ್ನು ಪ್ರತಿಪಾದಿಸಿದರು. ಸಾಹಿತ್ಯ ಆಸಕ್ತರು ಇದ್ದರು. ಉಜ್ವಲ ಬಸರಿ ಸ್ವಾಗತಿಸಿದರು. ಇಷ್ಟಲಿಂಗ ಶಿರಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.