ADVERTISEMENT

ಹಳಿಂಗಳಿಗೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 16:19 IST
Last Updated 24 ಆಗಸ್ಟ್ 2021, 16:19 IST
ತೇರದಾಳ ಸಮೀಪದ ಹಳಿಂಗಳಿ ಗುಡ್ಡದ ಪ್ರದೇಶದಲ್ಲಿ ನಡೆಯುತ್ತಿರುವ ತಮದಡ್ಡಿ ಪುನರ್ವಸತಿ ಕಾಮಗಾರಿ ನಡೆದ ಜಾಗಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಅಲ್ಲಿ ಮುನಿಗಳಿಂದ ಮಾಹಿತಿ ಪಡೆದರು
ತೇರದಾಳ ಸಮೀಪದ ಹಳಿಂಗಳಿ ಗುಡ್ಡದ ಪ್ರದೇಶದಲ್ಲಿ ನಡೆಯುತ್ತಿರುವ ತಮದಡ್ಡಿ ಪುನರ್ವಸತಿ ಕಾಮಗಾರಿ ನಡೆದ ಜಾಗಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಅಲ್ಲಿ ಮುನಿಗಳಿಂದ ಮಾಹಿತಿ ಪಡೆದರು   

ತೇರದಾಳ: ಸಮೀಪದ ಹಳಿಂಗಳಿ ಬೆಟ್ಟಕ್ಕೆ ಮಂಗಳವಾರ ಪುರಾತತ್ವ ಇಲಾಖೆ ಅಧಿಕಾರಿಗಳು ದಿಢೀರನೆ ಭೇಟಿ ನೀಡಿದ್ದು, ಮುಳುಗಡೆ ಗ್ರಾಮ ತಮದಡ್ಡಿ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ನಡೆದಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಮಂಗಳವಾರ ಮಧ್ಯಾಹ್ನದ ವೇಳೆಗೆ ಧಾರವಾಡ ಪುರಾತತ್ವ ಇಲಾಖೆಯ ಉಪನಿರ್ದೇಶಕ ಆರ್. ಶೇಜೆಶ್ವರ ಹಾಗೂ ಶಿವಮೊಗ್ಗದ ವಿಶ್ರಾಂತ ಅಧಿಕಾರಿ ಡಾ. ಎಸ್.ಜಿ. ಸಾಮಕ ಹಳಿಂಗಳಿ ಭದ್ರಗಿರಿ ಬೆಟ್ಟಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ತಮದಡ್ಡಿ ಪುನರ್ವಸತಿ ಕಲ್ಪಿಸಲು ಅಭಿವೃದ್ಧಿ ಕಾರ್ಯ ನಡೆದಿತ್ತು.

ಈ ವೇಳೆ ಪುರಾತತ್ವ ಇಲಾಖೆ ಅಧಿಕಾರಿಗಳು ಇದು ನಮ್ಮ ಇಲಾಖೆಯ ಪ್ರಾಚೀನ ಇತಿಹಾಸವುಳ್ಳ ಜಾಗವಾಗಿದೆ. ಇಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ಕೆಲಸ ಸ್ಥಗಿತಗೊಳಿಸಿ ಎಂದು ಜೆಸಿಬಿ ಯಂತ್ರಗಳನ್ನು ಬಂದ್ ಮಾಡಿಸಿದರು.

ADVERTISEMENT

ಪುನರ್ವಸತಿ ಕಾಮಗಾರಿ ಸ್ಥಗಿತಗೊಳಿಸಿದ ವಿಷಯ ತಿಳಿದು ಸ್ಥಳಕ್ಕೆ ಬಂದ ಕೃಷ್ಣಾ ಮೇಲ್ದಂಡೆ ಯೋಜನೆ ರಬಕವಿ ವಿಭಾಗದ ಎಇಇ ಆರ್.ಕೆ.ಕುಲಕರ್ಣಿ 2014ರಲ್ಲಿ ಸ್ಥಳೀಯ ಹಳಿಂಗಳಿ ಗ್ರಾಮ ಪಂಚಾಯ್ತಿಯಲ್ಲಿ ಈ ಜಾಗವನ್ನು ತಮದಡ್ಡಿ ಪುನರ್ವಸತಿಗೆ ಬಳಸಲು ಠರಾವು ಮಾಡಲಾಗಿದೆ. 2016ರಲ್ಲಿ ಪುನರ್ವಸತಿಗೆ ಸರ್ಕಾರ ಈ ಜಾಗ ನಿಗದಿಗೊಳಿಸಿದೆ.
2019ರಲ್ಲಿ ಇಲ್ಲಿ ಲೇಔಟ್ ಮಾಡಿಕೊಡಲು ಕಂದಾಯ ಇಲಾಖೆ ಅನುಮೋದನೆ ಪಡೆದು ಈಗ ಕೆಲಸ ಆರಂಭವಾಗಿದೆ.
ಇಲ್ಲಿಯವರೆಗೆ ಇಲ್ಲದ ಹಲವು ಇಲಾಖೆಗಳು ಈಗ ದಿಢೀರನೆ ಬರುತ್ತಿರುವುದು ಅನುಮಾನಗಳನ್ನು ಹುಟ್ಟುಹಾಕುತ್ತಿವೆ ಎಂದರು.

ಕೇವಲ ಮಾತಿನಿಂದ ಕೆಲಸ ನಿಲ್ಲಿಸಿ ಎಂದರೆ ಆಗುವುದಿಲ್ಲ. ಸಂಬಂಧಿಸಿದ ಇಲಾಖೆ ಅಥವಾ ತಹಶೀಲ್ದಾರ್ ಅವರಿಂದ ಕೆಲಸ ಸ್ಥಗಿತಗೊಳಿಸುವ ಬಗ್ಗೆ ಅಧಿಕೃತ ಆದೇಶ ಬರುವವರೆಗೆ ಕೆಲಸ ನಿಲ್ಲಿಸುವುದಿಲ್ಲ ಎಂದು ಹೇಳಿ ಜೆಸಿಬಿ ಯಂತ್ರ ಪ್ರಾರಂಭಿಸಿದರು. ತಹಶೀಲ್ದಾರ್ ಬಳಿಯೆ ಮಾತನಾಡುತ್ತೇವೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.