ಜಮಖಂಡಿ: ‘ಕಾಯಕಯೋಗಿಗಳಾಗಿದ್ದ 12ನೇ ಶತಮಾನದ ಬಸವಾದಿ ಶರಣರು ಯಾರ ಋಣದಲ್ಲಿಯೂ ಇರಲಿಲ್ಲ. ಹಾಗಾಗಿ ಅವರು ಸಾವಿಗೂ ಹೆದರಿರಲಿಲ್ಲ. ಅವರು ಸಾವಿಗೂ ಸವಾಲು ಹಾಕಿದ್ದರು’ ಎಂದು ಬಸವ ಕೇಂದ್ರದ ಅಧ್ಯಕ್ಷ, ವಕೀಲ ರವಿ ಯಡಹಳ್ಳಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಡಾಲರ್ಸ್ ಕಾಲೋನಿಯ ಉದ್ಯಾನವನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ‘ಮರಣವೇ ಮಹಾನವಮಿ’ ವಿಷಯ ಕುರಿತು ಉಪನ್ಯಾಸ ನೀಡಿದರು.
ರೋಗ ಬಂದರೆ ನರಳು. ಸಾವು ಬಂದರೆ ಬರಲಿ. ನಾಳೆ ಬರುವುದು ನಮಗೆ ಇಂದೇ ಬರಲಿ. ಇಂದು ಬರುವುದು ಈಗಲೇ ಬರಲಿ ಎಂದು ಶರಣರು ದೇವರಿಗೂ ಸವಾಲು ಹಾಕಿದ್ದರು. ದಲಿತರಿಗೆ ನ್ಯಾಯ ಕೊಡಿಸುವ, ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಸಲುವಾಗಿ 12ನೇ ಶತಮಾನದ ಶರಣರು ತಮ್ಮ ಇಡೀ ಜೀವನವನ್ನು ಪಣಕ್ಕಿಟ್ಟಿದ್ದರು ಎಂದರು.
ಓಲೆಮಠದ ಆನಂದ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ‘ಪ್ರತಿಕ್ಷಣವೂ ಸಾವು ನಮ್ಮ ನೆರಳಿನಂತೆ ನಮ್ಮ ಬೆನ್ನು ಹತ್ತಿರುತ್ತದೆ. ಆದ್ದರಿಂದ ಆಸ್ತಿ, ಅಂತಸ್ತು, ಅಧಿಕಾರದ ಬೆನ್ನು ಬೀಳಬಾರದು. ನಶ್ವರ ಸಂಪತ್ತು ಗಳಿಕೆಯ ಹಿಂದೆ ಬೀಳಬಾರದು. ಬದಲಾಗಿ ಯಾರಿಗೂ ಗೊತ್ತಾಗದ, ಮುಟ್ಟಲಾಗದ ಸಂಪತ್ತನ್ನು ಗಳಿಸಬೇಕು’ ಎಂದರು.
ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ ಮಾತನಾಡಿ, ಕ ಮೂಢನಂಬಿಕೆ, ಕಂದಾಚಾರಕ್ಕೆ ಅಂಟಿಕೊಳ್ಳಬಾರದು. ಸಮಾಜದಲ್ಲಿ ಪರಿವರ್ತನೆ ತರುವಂತಹ ಬದುಕು ನಮ್ಮದಾಗಬೇಕು ಎಂದರು.
ಇಂಚಗೇರಿ ಸಂಪ್ರದಾಯದ ಪ್ರದೀಪ ಮೆಟಗುಡ್ಡ, ಸ್ನೇಹಲೋಕ ಉದ್ಯಾನವನದ ಅಧ್ಯಕ್ಷ ಸಚಿನ ಸೋನಾರ ಇದ್ದರು. ದೀಪಾ ಯಡಹಳ್ಳಿ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಪಿಡಿಒ ಅಶೋಕ ಜನಗೌಡ ಸ್ವಾಗತಿಸಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜು ವಾರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಮೇಶ ದಾನಗೌಡ ನಿರೂಪಿಸಿದರು. ಪ್ರೊ.ರಾಜಶೇಖರ ಹೊಸಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.