ಬೀಳಗಿ: ತಾಲ್ಲೂಕಿನ ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆಯ ಕೊರತೆಯಿಂದ ಸ್ಥಗಿತಗೊಳ್ಳುತ್ತಿದ್ದು, ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಹಿತಿಯಂತೆ ಬೀಳಗಿ ತಾಲ್ಲೂಕಿನಲ್ಲಿ ಒಟ್ಟು 83 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, ಈ ಪೈಕಿ 74 ಘಟಕಗಳು ಸಕ್ರಿಯವಾಗಿವೆ. ಏಪ್ರಿಲ್‌ವರೆಗೆ 9 ಘಟಕಗಳು ಸ್ಥಗಿತಗೊಂಡಿವೆ.
ಕೆಲವು ಘಟಕಳಿಗೆ ಸರಿಯಾದ ವಿದ್ಯುತ್ ಪೂರೈಕೆ ಇಲ್ಲ. ಇನ್ನೂ ಕೆಲವಕ್ಕೆ ಬಿಡಿಭಾಗಗಳ ಕೊರತೆ. ಕೆಲವು ಘಟಕಗಳು ದುರಸ್ತಿ ಆಗುವ ಸ್ಥಿತಿಯಲ್ಲಿಯೂ ಇಲ್ಲ. ಬೀಳಗಿ ನಗರದಲ್ಲಿ ಖಾಸಗಿ ಶುದ್ಧ ನೀರಿನ ಘಟಕಗಳಿವೆ. ಒಂದು ಕ್ಯಾನ್ ನೀರಿಗೆ ₹ 10 ಕೊಟ್ಟು ತರುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ. ಗ್ರಾಮಸ್ಥರು ನಲ್ಲಿಯ ನೀರು, ಇಲ್ಲವೇ ಕೊಳವೆ ಬಾವಿಯ ನೀರಿನ್ನೇ ಕುಡಿಯಬೇಕಿದೆ. ಇದರಿಂದ ಆರೋಗ್ಯದ ಸಮಸ್ಯೆಯೂ ಕಾಡುತ್ತಿದೆ. ಕಳೆದ ಎಂಟು ವರ್ಷಗಳಿಂದ ಹೊಸ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಇಲಾಖೆಯಿಂದ ಅನುಮತಿಯನ್ನೇ ನೀಡಿಲ್ಲ.
ಕುಡಿಯುವ ನೀರಿನ ಸೌಲಭ್ಯಕ್ಕಾಗಿ ತಾಲ್ಲೂಕಿನಲ್ಲಿ 313 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಪ್ರಸ್ತುತ 267 ಚಾಲ್ತಿಯಲ್ಲಿವೆ. 39 ಕೊಳವೆಬಾವಿಗಳು ಸ್ಥಗಿತಗೊಂಡಿವೆ. 7 ಕೊಳವೆಬಾವಿಗಳು ದುರಸ್ತಿ ಆಗಬೇಕಿವೆ.
ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ನೀರಿನ ಕೊರತೆ ಇರುವುದರಿಂದ ಇಂತಹ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಬೇಕೇ ಬೇಕು. ಅದಲ್ಲದೇ, ಕೆಲವು ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಿದೆ. ಇಂತಹ ಗ್ರಾಮಗಳಿಗೆ ನೀರಿನ ಪೂರೈಕೆ ಜೊತೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬುದು ಜನರ ಒತ್ತಾಯ.
9 ಘಟಕಗಳ ದುರಸ್ತಿಗೆ ಒತ್ತಾಯ
ಬೀಳಗಿ ತಾಲ್ಲೂಕಿನಲ್ಲಿರುವ 83 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 11ನ್ನು ಗ್ರಾಮ ಪಂಚಾಯಿತಿಗಳಿಗೆ ಒಪ್ಪಿಸಲಾಗಿದೆ. ಉಳಿದವುಗಳನ್ನು ಗುಡ್‌ವಿಲ್ ಏಜೆನ್ಸಿ ನಿರ್ವಹಣೆ ಮಾಡುತ್ತಿದೆ. ಸ್ಥಗಿತಗೊಂಡ 9 ಘಟಕಗಳನ್ನು ದುರಸ್ತಿ ಮಾಡುವಂತೆ ಏಜೆನ್ಸಿಯವರಿಗೆ ಒತ್ತಾಯಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಧಿಕಾರಿ ಆರ್.ಕೆ. ಡಂಬಳ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.