ಜಮಖಂಡಿ: ನಗರದ ಬಸ್ ನಿಲ್ದಾಣಕ್ಕೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಪ‍್ರಜಾವಾಣಿ ಶುಕ್ರವಾರ ’ಗಬ್ಬೆದ್ದು ನಾರುತ್ತಿದೆ ಬಸ್ ನಿಲ್ದಾಣ’ ಎಂಬ ಸುದ್ದಿ ಪ್ರಕಟಿಸಿತ್ತು.
ಬಸ್ ನಿಲ್ದಾಣದ ಶೌಚಾಲಯಗಳನ್ನು ನಿತ್ಯ ಸ್ವಚ್ಛಗೊಳಿಸಬೇಕು. ನಿಲ್ದಾಣದಲ್ಲಿ ಬೆಳೆದಿರುವ ಕಸ–ಕಡ್ಡಿ, ಪ್ಲಾಸ್ಟಿಕ್, ಕಾಗದ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದು ಘಟಕ ವ್ಯವಸ್ಥಾಪಕ ಎಸ್.ಬಿ. ಗಸ್ತಿ ಅವರಿಗೆ ಸೂಚಿಸಿದರು.
ಆಲಂಕಾರಿಕ ಗಿಡಗಳನ್ನು ಹಚ್ಚಲು ಬಸ್ ನಿಲ್ದಾಣದ ಒಳಗೆ ಎರಡು ಕಡೆ ಖಾಲಿ ಸ್ಥಳ ಬಿಟ್ಟಿದ್ದು, ಅಲ್ಲಿ ನೀರು ನಿಂತು ಗಬ್ಬೆದ್ದು ನಾರುವುದನ್ನು ಗಮನಿಸಿ ನಗರಸಭೆ ಕಾರ್ಮಿಕರಿಂದ ಆ ಜಾಗವನನ್ನು ತ್ವರಿತವಾಗಿ ಸ್ವಚ್ಛತೆ ಮಾಡಿಸುವಂತೆ ಸೂಚಿಸಿದರು. ಒಂದು ಬಾರಿ ನಗರಸಭೆ ಸಿಬ್ಬಂದಿ ಸ್ವಚ್ಛ ಮಾಡುತ್ತಾರೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದೂ ತಾಕೀತು ಮಾಡಿದರು.
‘ಈ ರೀತಿ ಕೊಳಚೆ ನಿರ್ಮಾಣವಾದರೆ ಸೊಳ್ಳೆಗಳಾಗುತ್ತವೆ. ನಿತ್ಯ ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಂದು ಹೋಗುತ್ತಾರೆ ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹೀಗಾಗಿ ಸ್ವಚ್ಛತೆಗೆ ಆದ್ಯತೆ ನೀಡಿ’ ಎಂದು ಹೇಳಿದರು.
ತಹಶೀಲ್ದಾರ್ ಅನಿಲ ಬಡಿಗೇರ, ತಾಲ್ಲೂಕು ವೈದ್ಯಾಧಿಕಾರಿ ಜಿ.ಎಸ್. ಗಲಗಲಿ, ನಗರಸಭೆಯ ಕುಸುಮಾ ಸಪ್ಪಡ್ಲಾ, ಸಾರಿಗೆ ನಿಯಂತ್ರಕ ವಿಠ್ಠಲ ಕಾಂಬಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.