ADVERTISEMENT

ಬಾಲ್ಯ ವಿವಾಹ; ತನಿಖೆಗೆ ಸಮಿತಿ ರಚನೆ

ಆಡಗಲ್‌ಗೆ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ಎಸ್.ವಾಳ್ವೇಕರ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 11:54 IST
Last Updated 22 ನವೆಂಬರ್ 2019, 11:54 IST

ಬಾಗಲಕೋಟೆ: ’ಬಾದಾಮಿ ತಾಲ್ಲೂಕಿನ ಆಡಗಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯ ವಿವಾಹ ಕಂಡುಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯಾಡಳಿತದ ವೈಫಲ್ಯದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗುವುದು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ಎಸ್.ವಾಳ್ವೇಕರ್ ತಿಳಿಸಿದರು.

ಆಡಗಲ್‌ನಲ್ಲಿ 30ಕ್ಕೂ ಹೆಚ್ಚು ಬಾಲ್ಯ ವಿವಾಹವಾದ ಜೋಡಿಗಳಿವೆ ಎಂಬುದರ ಬಗ್ಗೆ ’ಪ್ರಜಾವಾಣಿ’ ನವೆಂಬರ್ 7ರಂದು ವಿಶೇಷ ವರದಿ ಪ್ರಕಟಿಸಿತ್ತು. ಅದನ್ನು ಗಮನಿಸಿ ಭಾರತಿ ಎಸ್.ವಾಳ್ವೇಕರ್ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

’ಪತ್ರಿಕೆಯ ವರದಿ ಮೇಲ್ನೋಟಕ್ಕೆ ಸತ್ಯವಿದೆ. ಇಲ್ಲಿ ಬಾಲ್ಯವಿವಾಹಕ್ಕೆಕೆಲವು ಸಾಮಾಜಿಕ ಸಮಸ್ಯೆಗಳೂ ಕಾರಣವಾಗಿವೆ. ಆ ಬಗ್ಗೆ ಆಯೋಗದ ಅಧ್ಯಕ್ಷರಿಗೆ ವರದಿ ನೀಡುವೆ. ತನಿಖೆಗೆ ಆಯೋಗದಿಂದಲೇ ಸಮಿತಿ ರಚಿಸಲಾಗುವುದು’ ಎಂದರು.

ADVERTISEMENT

ಆಡಗಲ್‌ನ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಪಾಲ್ಗೊಂಡು ಅವರ ಅಳಲು ಆಲಿಸಿದ ಭಾರತಿ, ಅದಕ್ಕೂ ಮುನ್ನ ಶಾಲೆಯಲ್ಲಿಯೇ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಈ ಪಿಡುಗು ತಡೆಗಟ್ಟುವಲ್ಲಿ ಆಗಿರುವ ವೈಫಲ್ಯದ ಬಗ್ಗೆ ತರಾಟೆಗೆ ತೆಗೆದುಕೊಂಡರು. ಬಾಲ್ಯ ವಿವಾಹ ಆಗಿರುವ 11 ಮಕ್ಕಳು ಅದೇ ಶಾಲೆಯಲ್ಲಿ ಓದುತ್ತಿರುವ ಸಂಗತಿಯೂ ಇದೇ ವೇಳೆ ಅವರ ಗಮನಕ್ಕೆ ಬಂದಿತು.

ಶಾಲೆ ಆರಂಭಿಸಿ, ಇಲ್ಲ ಮದುವೆ ಮಾಡುತ್ತಾರೆ;

’ಎಂಟನೇ ತರಗತಿಯಲ್ಲಿ ನಾವು 42 ಮಂದಿ ಓದುತ್ತಿದ್ದೇವೆ. ನಮ್ಮೂರಲ್ಲಿ ಹೈಸ್ಕೂಲ್ ಇಲ್ಲ. ಬೇರೆ ಕಡೆ ಕಳುಹಿಸಲು‍ಪೋಷಕರು ಒಪ್ಪುವುದಿಲ್ಲ. ಶಾಲೆ ಬಿಡಿಸಿ ಮದುವೆ ಮಾಡುತ್ತಾರೆ’ ಎಂದು ತಾಲ್ಲೂಕಿನ ಕಬ್ಬಳಗೇರಿಯ ವಿದ್ಯಾರ್ಥಿನಿ ಮಂಜುಳಾ ಬೇನಾಳ ಗ್ರಾಮ ಸಭೆಯಲ್ಲಿ ಅಳಲು ತೋಡಿಕೊಂಡಳು.

ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿ ಯಾವುದೇ ಪ್ರೌಢಶಾಲೆ ಇಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆದ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆಗ ಮಕ್ಕಳಿಂದ ಚಪ್ಪಾಳೆ ಸುರಿಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.