ಬಾಗಲಕೋಟೆ: ‘ನಮ್ಮ ಬದುಕಿನ ವಿಧಾನವನ್ನು ಪರಿಸರಕ್ಕೆ ಪೂರಕವಾಗಿ ಬಳಸಿಕೊಂಡರೆ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.
ನವನಗರದ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಜೀವಿತದ ಕೊನೆಯವರೆಗೂ ಪರಿಸರಕ್ಕೆ ಕೃತಜ್ಞತಾ ಪೂರ್ವಕವಾಗಿ ಇರಬೇಕಾಗುತ್ತದೆ. ಪರಿಸರ ಇಲ್ಲದೇ ಯಾವ ಜೀವಿಯೂ ಉಸಿರಾಡಲು ಸಾಧ್ಯವಾಗುವುದಿಲ್ಲ’ ಎಂದರು.
‘ದೈನಂದಿನ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಬೇಕಿದೆ. ಯಾವ ಊರಿಗೆ ಹೋಗಿ ಕಾಲಿಟ್ಟರೂ ಅರ್ಧ ಕಿ.ಮೀ ಮುಂಚೆಯೇ ಪ್ಲಾಸ್ಟಿಕ್ ರಾಶಿ ಸ್ವಾಗತ ಕೋರುತ್ತದೆ. ನೀರಿನ ಮೂಲದ ಸಮೀಪ ಪ್ಲಾಸ್ಟಿಕ್ ತೊಟ್ಟಿಗಳನ್ನು ಮಾಡಿರುತ್ತಾರೆ. ಮಾನವ ಕುಲ ಮಾತ್ರ ಪರಿಸರಕ್ಕೆ ವಿಮುಖವಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ. ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಜಿ.ಮಿರ್ಜಿ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯ ಕೊನೆಗಳೊಳಿಸುವುದು ಈ ವರ್ಷದ ಥೀಮ್ ಆಗಿದ್ದು, ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಅನುಲಕುಮಾರ ತಳಗೇರಿ ಮಾತನಾಡಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವ ವಿತರಣೆ ಮಾಡಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಸಿ.ಜಿ.ಮಿರ್ಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ, ಸಹಾಯಕ ಅರಣ್ಯ ಅಧಿಕಾರಿ ರೂಪಾ ವಿ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.