ADVERTISEMENT

ಗುಳೇದಗುಡ್ಡ: ಶೌಚಾಲಯವಾದ ಗಾಂಧಿ ಸ್ಮಾರಕ ಭವನ 

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:58 IST
Last Updated 6 ಆಗಸ್ಟ್ 2025, 2:58 IST
ಗಾಂಧಿ ಸ್ಮಾರಕ ಭವನದಲ್ಲಿ ಮಲವಿಸರ್ಜನೆಗೆ ಹೋಗುತ್ತಿರುವ ನೋಟ
ಗಾಂಧಿ ಸ್ಮಾರಕ ಭವನದಲ್ಲಿ ಮಲವಿಸರ್ಜನೆಗೆ ಹೋಗುತ್ತಿರುವ ನೋಟ   

ಗುಳೇದಗುಡ್ಡ : ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಗಾಂಧಿ ಸ್ಮಾರಕ ಭವನ ಈಗ ಶೌಚಾಲಯವಾದಂತಿದೆ. ಈ ಹಿಂದೆ ಇದ್ದ ಉದ್ಯಾನವನ ನಾಶವಾಗಿದೆ. ಅಭಿವೃದ್ಧಿಯ ನೆಪದಲ್ಲಿ ಇದ್ದ ಕಟ್ಟಡ ಕೆಡವಿ ಈಗ ಹೊಸ ಕಟ್ಟಡ ಕಟ್ಟಲಾಗುತ್ತಿದೆ. ಎರಡು ವರ್ಷಗಳಿಂದ ಇದು ನನೆಗುದಿಗೆ ಬಿದ್ದಿದ್ದರಿಂದ ಮುಳ್ಳು ಕಂಟಿಗಳು ಬೆಳೆದಿವೆ.

ಭವನದ ಅಕ್ಕ ಪಕ್ಕದ ಹಲವರು ಬೆಳಿಗ್ಗೆ ಇಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದಿದೆ.

ಹಿನ್ನಲೆ: ಗಾಂಧೀಜಿಯವರ ನಿಧನದ ನಂತರ 1948 ರಲ್ಲಿ ದೇಶದಾದ್ಯಂತ ಗಾಂಧಿ ಸ್ಮಾರಕ ನಿಧಿ ಸಂಗ್ರಹಣೆಗೆ ಕಾಂಗ್ರೆಸ್ ಮುಖಂಡರು ಮುಂದೆ ಬಂದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಗುಳೇದಗುಡ್ಡದ ಮಡಿವಾಳಪ್ಪ ಆರ್.ಪಟ್ಟಣಶೆಟ್ಟಿ, ಸಿದ್ರಾಮಪ್ಪ ತಿಪ್ಪಾ, ಲಕ್ಷ್ಮಣಸಾ ಕಾವಡೆ, ಸಾಬಣ್ಣ ಶಿಂಧೆ ಹಾಗೂ ಅಂಬಲಿ ಚನ್ನಪ್ಪನವರು ₹50 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಗುಳೇದಗುಡ್ಡ ಸ್ಥಾನಿಕ ಸಮಿತಿಗೆ ಒಪ್ಪಿಸಿ ಇಲ್ಲಿ ಗಾಂಧಿ ಸ್ಮಾರಕ ಭವನ ನಿರ್ಮಿಸಿ ಎಂದು ಹೇಳಿದರಂತೆ. ಅದರಂತೆ 1951 ರಲ್ಲಿ ಪ್ರವಾಸಿ ಮಂದಿರದ ಎದುರಿಗೆ ಭವ್ಯವಾದ ಗಾಂಧಿ ಭವನ ಹಾಗೂ ಅದರ ಸುತ್ತಲೂ ಸುಂದರವಾದ ಉದ್ಯಾನ ನಿರ್ಮಾಣವಾಯಿತು.

ADVERTISEMENT

ಅರವತ್ತು ವರ್ಷಗಳ ನಂತರ ಅದು ಶಿಥಿಲಗೊಂಡ ನಂತರ ಪುರಸಭೆ ಅನುದಾನದಲ್ಲಿ 2008-09 ನೇ ಸಾಲಿನಲ್ಲಿ ನೂತನ ಕಟ್ಟಡಕ್ಕೆ ಭೂಮಿಪೂಜೆ ಮಾಡಿ ₹ 49 ಲಕ್ಷ ಅನುದಾನ ಬಳಸಲಾಗಿದೆ. ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದ ಶಾಸಕರಾಗಿದ್ದಾಗ ಸಿಎಂ ನಿಧಿಯಿಂದ ₹50 ಲಕ್ಷ ಬಂದಿದೆ. ಆದರೆ ಅದು ಸರಿಯಾಗಿ ಬಳಕೆ ಮಾಡದೆ ಗುತ್ತಿಗೆ ಪಡೆದವರು ಅರ್ಧಕ್ಕೆ ನಿಲ್ಲಿಸಿದ್ದಾರೆ.

ರೂಪರೇಷೆ : ಸುಮಾರು 500 ಆಸನಗಳ ದೊಡ್ಡ ಒಳಾಂಗಣ. ವಿಶಾಲ ಪ್ಲಾಟ್‍ಫಾರ್ಮ, ಆಧುನಿಕ ಲೈಟಿಂಗ್‌ ಮತ್ತು ಸೌಂಡ್‍ಸಿಸ್ಟಮ್ ಒಳಗೊಂಡ ಭವ್ಯಭವನ ನಿರ್ಮಾಣವಾಗಲಿದೆ. ಗಾಂಧಿ ಹೆಜ್ಜೆ ಗುರುತಿನ ಸ್ಮರಣೆ ಚಿತ್ರಗಳು, ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಚಿತ್ರಗಳ ಅನಾವರಣಗೊಳಿಸುವ ಕಟ್ಟಡ ಇದಾಗಿತ್ತು. ಆದರೆ ಈಗ ಇದು ಎಲ್ಲಿ ನೋಡಿದರಲ್ಲಿ ಮಲ, ಮೂತ್ರದಿಂದ ದುರ್ನಾತ ಬೀರುತ್ತಿದ್ದು ಹಂದಿಗಳ ತಾಣವಾಗಿದೆ.

 ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ಗಾಂಧೀ ಭವನದ ಅರ್ಧಕ್ಕೆ ನಿಂತ ಕಟ್ಟಡ
ಸ್ವಾತಂತ್ರ್ಯದ ಕಿಚ್ಚು ಹಚ್ಚಿದವರ ಸ್ಮರಣೆಯ ಕೇಂದ್ರವಾಗಬೇಕಿದ್ದ ಈ ಭವನಕ್ಕೆ ಗ್ರಹಣ ಹಿಡಿದಿದೆ. ಮತಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಹರಿದು ಬರುತ್ತಿದ್ದರೂ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸುವ ಭವನ ಅರ್ಧಕ್ಕೆ ನಿಂತಿರುವುದು ದುರಂತವೇ ಸರಿ
ಸಿ.ಎಂ.ಜೋಶಿಕಸಾಪ ಮಾಜಿ ಅಧ್ಯಕ್ಷ ಗುಳೇದಗುಡ್ಡ.
ಗಾಂಧಿ ಸ್ಮಾರಕ ಭವನವನ್ನು ಕಟ್ಟಡ ಪೂರ್ಣಗೊಳಿಸಬೇಕು. ಅವ್ಯವಸ್ಥೆ ಅನೈತಿಕ ಚಟುವಟಿಕೆಯಿಂದ ರಕ್ಷಿಸಬೇಕು
ಮೋಹನ ಕರನಂದಿರಂಗಕರ್ಮಿಗುಳೇದಗುಡ್ಡ.
ಸದ್ಯದಲ್ಲಿಯೇ ಗಾಂಧಿ ಭವನದ ರಕ್ಷಣೆಗೆ ಒಬ್ಬರನ್ನು ನೇಮಿಸಲಾಗುವುದು ಮತ್ತು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು
ಎ.ಎಚ್.ಮುಜಾವರಮುಖ್ಯಾಧಿಕಾರಿ ಪುರಸಭೆಗುಳೇದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.