ಕೂಡಲಸಂಗಮ: ‘ನಿತ್ಯದ ಬದುಕು, ಕೃಷಿ, ಕೈಗಾರಿಕೆಗೆ ನೀರು ಅಗತ್ಯ, ಕೃಷ್ಣಾ, ಮಲಪ್ರಭಾ ನದಿಯನ್ನು ಕಲುಷಿತಗೊಳ್ಳದಂತೆ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಸೋಮವಾರ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಪ್ರವೇಶ ದ್ವಾರದ ಮುಂದೆ ನಡೆದ ಕೃಷ್ಣಾ ಜಲಯಾತ್ರೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ನದಿಗಳನ್ನು ರಕ್ಷಣೆ ಮಾಡದೇ ಇದ್ದರೆ ಮುಂದಿನ ಪೀಳಿಗೆಗೆ ನಾವೇ ಅನ್ಯಾಯ ಮಾಡಿದಂತೆ. ಹುನಗುಂದ ತಾಲೂಕಿನ 60 ಸಾವಿರ ಎಕರೆ ಭೂಮಿಗೆ ಹನಿ ನೀರಾವರಿ ಕಲ್ಪಿಸುವ ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತಂದಿದೆ. ಬಳಕೆ ಮಾಡುವ ತಾಳ್ಮೆ ನಮ್ಮ ರೈತರಿಗೆ ಇಲ್ಲ. ಈ ಯೋಜನೆಯನ್ನೇ ಮತ್ತಷ್ಟು ಸುಧಾರಿಸಿ ಜಾರಿಗೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದರು.
ಧಾರವಾಡ ವಾಲ್ಮಿ ನಿವೃತ್ತ ನಿರ್ದೇಶಕ ರಾಜೇಂದ್ರ ಪೊದ್ದಾರ ಮಾತನಾಡಿ, ‘ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಅರಣ್ಯ ನಾಶ, ನದಿ, ಉಪನದಿ ತೀರಗಳ ಒತ್ತುವರಿ, ಮರಳುಗಳ ಅಕ್ರಮ, ವ್ಯಾಪಕ ಗಣಿಗಾರಿಕೆ, ಅವೈಜ್ಞಾನಿಕವಾಗಿ ನದಿಯಲ್ಲಿ ರಚಿತಗೊಳ್ಳುತ್ತಿರುವ ಸೇತುವೆಗಳಿಂದ ನದಿಯ ಆಳ ಕಡಿಮೆಯಾಗಿ, ಹೂಳಿನ ಪ್ರಮಾಣ ದಿನೇ ದಿನೇ ಅಧಿಕಗೊಳ್ಳುತ್ತಿದೆ’ ಎಂದು ವಿಷಾದಿಸಿದರು.
‘ನದಿಯ ತೀರದಲ್ಲಿ ಹೆಚ್ಚುತ್ತಿರುವ ಸಕ್ಕರೆ, ಕಾಗದ, ಗೊಬ್ಬರ ಮುಂತಾದ ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ಪದಾರ್ಥಗಳು, ಪ್ಲಾಸ್ಟಿಕ್ ಬಳಕೆ, ಪೂಜೆ, ನಂಬಿಕೆಗಳ ಹೆಸರಿನಲ್ಲಿ ನದಿ ತೀರ ಹೆಚ್ಚು ಕಲ್ಮಶಗೊಳ್ಳುತ್ತಿದೆ. ಈ ಸಮಸ್ಯೆಗಳಿಂದ ನದಿಯನ್ನು ಮುಕ್ತಮಾಡಲು, ಜನರಿಗೆ ಜಾಗೃತಿ ಮೂಡಿಸಲು ಯಾತ್ರೆ ಹಮ್ಮಿಕೊಂಡಿದೆ. ಆಸಕ್ತರು ಭಾಗವಹಿಸಬಹುದು’ ಎಂದರು.
ಹಿರಿಯ ಮುಖಂಡ ಎಂ.ಪಿ.ನಾಡಗೌಡ ಮಾತನಾಡಿ, ‘ನದಿ ಇರುವ ಜಿಲ್ಲೆಯಲ್ಲಿ ಕಡಿಮೆ ನೀರು ಉಪಯೋಗಿಸುವ ಕಾರ್ಖಾನೆ ಸ್ಥಾಪಿಸುವ ಬದಲು ಅಧಿಕ ನೀರು ಬಳಕೆ ಮಾಡುವ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪನೆ ಮಾಡುತ್ತಿರುವುದು ದುರಂತ. ನದಿ ಸಂರಕ್ಷಣೆಗೆ ಆದ್ಯತೆ ಕೊಡದೇ ಇದ್ದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಮನಗೂಳಿ ವಿರತೀಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ನೀರಿಗಾಗಿ ವೈರಾಗ್ಯ ತಾಳಿದ ಬುದ್ದಪೂರ್ಣಿಮೆಯ ದಿನ ಕೃಷ್ಣಾ ನದಿ ಸಂರಕ್ಷಣೆಗಾಗಿ ಜಲಯಾತ್ರೆ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಲಿಂಗಾಯತರ ಪವಿತ್ರ ಸ್ಥಳ ಕೂಡಲಸಂಗಮದಿಂದ ಹೊರಟಿರುವುದು ಹೆಮ್ಮೆಯ ಸಂಗತಿ. ಸುಕ್ಷೇತ್ರದಲ್ಲಿಯೇ ನದಿಯ ಸಂರಕ್ಷಣೆಯಾಗಬೇಕು’ ಎಂದರು.
ಸಮಾರಂಭದಲ್ಲಿ ಬಸವನಬಾಗೇವಾಡಿ ಬಸವ ಸೈನ್ಯ ಅಧ್ಯಕ್ಷ ಶಂಕರಗೌಡ ಬಿರಾದಾರ, ನದಿ ಸಂರಕ್ಷಣೆ ಹೋರಾಟಗಾರರಾದ ಆಂಧ್ರಪ್ರದೇಶದ ಸತ್ಯನಾರಾಯಣ್ಣ, ಮಹಾರಾಷ್ಟ್ರದ ನರೇಂದ್ರ ಚೂಘ, ಅಮರೇಶ ನಾಗೂರ, ಗಂಗಾಧರ ದೊಡಮನಿ, ಗಂಗಣ್ಣ ಬಾಗೇವಾಡಿ, ಶೇಖರಗೌಡ ಗೌಡರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗವ್ವ ರಾಂಪೂರ ಮುಂತಾದವರು ಇದ್ದರು.
ಸುಕ್ಷೇತ್ರದಲ್ಲಿನ ಗಲೀಜು ತೆಗೆಯಲು ಆಗ್ರಹ
ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಬಳಿಯ ಕೃಷ್ಣಾ ಮಲಪ್ರಭಾ ನದಿ ದಡ ತಾಜ್ಯದಿಂದ ಕೂಡಿದೆ. ಗಬ್ಬು ನಾರುತ್ತಿದೆ. ದಡದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಪುಣ್ಯಸ್ನಾನದ ಹೆಸರಿನಲ್ಲಿ ಕಳೆದ ಬಟ್ಟೆಯನ್ನು ನದಿಯಲ್ಲಿಯೇ ಬಿಡುತ್ತಾರೆ. ಇದರಿಂದ ವಾತಾವರಣ ಮತ್ತಷ್ಟು ಕಲುಷಿತಗೊಂಡಿದೆ. ಕೊನೆಯ ಪಕ್ಷ ಪುಣ್ಯಕ್ಷೇತ್ರಗಳನ್ನಾದರೂ ರಕ್ಷಣೆ ಮಾಡಬೇಕು ಎಂದು ಜಲಯಾತ್ರೆಯ ಮುಖಂಡರು ಶಾಸಕರಿಗೆ ಆಗ್ರಹಿಸಿದರು. ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಕರೆ ಮಾಡಿ ‘ನದಿ ದಡವನ್ನು ಪ್ರತಿದಿನ ಸ್ವಚ್ಛ ಮಾಡಬೇಕು. ನಿರಂತರ ನಿಗಾ ವಹಿಸಬೇಕು’ ಎಂದು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.