ಬೀಳಗಿಯ ಕಾಶಿ ವಿಶ್ವನಾಥ ದೇವಾಲಯ
ಬೀಳಗಿ: ಶಿವರಾತ್ರಿ ನಿಮಿತ್ತ ಇಲ್ಲಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಮಾರ್ಚ್ 8ರಂದು ರಥೋತ್ಸವ ನಡೆಯಲಿದ್ದು, ಸುತ್ತಲಿನ ಹಳ್ಳಿಗಳ ಸಾವಿರಾರು ಜನ ಭಾಗವಹಿಸುತ್ತಾರೆ.
ಬೀಳಗಿಯ ಸಿಂಧೂರ ಲಕ್ಷ್ಮಣ ವೃತ್ತದಿಂದ ಎಡಭಾಗಕ್ಕೆ 2 ಕಿ.ಮೀ. ದೂರದಲ್ಲಿ ಕಾಶಿ ವಿಶ್ವನಾಥ ದೇವಾಲಯವಿದೆ. 10 ವರ್ಷಗಳ ಹಿಂದೆ ತಾಲ್ಲೂಕಿನ ವಿವಿಧ ಗ್ರಾಮಗಳ 220 ಜನ ಸೇರಿ ಕಾಶಿ ವಿಶ್ವನಾಥನ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದರು. ತಮ್ಮೂರಿನ ಅನೇಕ ಬಡ ಜನರಿಗೆ ಕಾಶಿಗೆ ಬಂದು ದರ್ಶನ ಪಡೆಯುವುದು ಅಸಾಧ್ಯವಾಗಬಹುದು ಮತ್ತು ಕಾಶಿಗೆ ಹೋದ ನೆನಪು ಶಾಶ್ವತವಾಗಿ ಇರಬೇಕು ಎಂಬ ಉದ್ದೇಶದಿಂದ ಕಾಶಿಯಿಂದ ತಮ್ಮೂರಿಗೆ ಒಂದು ಲಿಂಗ ತೆಗೆದುಕೊಂಡು ಹೋಗಲು ಸಂಕಲ್ಪಿಸಿದರು. ಲಕ್ಷ್ಮಪ್ಪ ಜಂಬಗಿ ಅವರು ಲಿಂಗ ಕೊಡಿಸಿದರು. ಭಕ್ತರು ಅದನ್ನು ತೆಗೆದುಕೊಂಡು ಊರಿಗೆ ಮರಳಿದಾಗ ಬೀಳಗಿಯ ಗದಿಗೆಪ್ಪ ಕರಿಗಾರ ಅವರು ಶಿವನ ದೇವಸ್ಥಾನ ನಿರ್ಮಿಸಿ ಲಿಂಗ ಪ್ರತಿಷ್ಠಾಪಿಸಲು 11 ಗುಂಟೆ ಜಮೀನು ದೇಣಿಗೆ ನೀಡಿದರು.
ಸಮೀಪದ ಅರಭಾವಿ ಗುಡ್ಡದ ಕಲ್ಲುಗಳನ್ನು ಬಳಸಿ ಭವ್ಯ ದೇವಾಲಯ ನಿರ್ಮಿಸಿ ಕಾಶಿಯಿಂದ ತಂದ ಲಿಂಗವನ್ನು ಪ್ರತಿಷ್ಠಾಪಿಸಲಾಯಿತು. ಸದ್ಯ ವಿಶ್ವನಾಥ ಸಾವಿರಾರು ಭಕ್ತರ ಆರಾಧ್ಯ ದೈವವಾಗಿ ನೆಲೆ ನಿಂತಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಬೆಳಿಗ್ಗೆ ಕಾಶಿ ವಿಶ್ವನಾಥ ದೇವರ ಪೂಜೆಗೆ ಸೊನ್ನದ ಗ್ರಾಮಸ್ಥರು ಕೃಷ್ಣೆಯಿಂದ ಪವಿತ್ರ ಜಲ ತರುತ್ತಾರೆ. ಢವಳೇಶ್ವರ ಗ್ರಾಮಸ್ಥರು ಮಹಾರುದ್ರಾಭಿಷೇಕ ನೆರವೇರಿಸುತ್ತಾರೆ. ನಾಗರಾಳ ಗ್ರಾಮದ ಗುರುರಾಜ ದೇಶಪಾಂಡೆ ಅವರಿಂದ ಹೋಮ ಹವನ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಜಾತ್ರೆಗೆ ಬರುವ ಭಕ್ತರಿಗಾಗಿ ಕಲಾದಗಿಯಿಂದ 20 ಕ್ವಿಂಟಲ್ ಚಿಕ್ಕು ಹಣ್ಣು, 25 ಕ್ವಿಂಟಲ್ ಖರ್ಜೂರ, ಬಾಳೆಹಣ್ಣು ಹಾಗೂ ಮಹಾಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಎಲ್ಲರೂ ಸೇರಿ ಭಕ್ತಿಭಾವದಿಂದ ಆಚರಿಸುವ ಜಾತ್ರೆ ಕಣ್ಮನ ಸೆಳೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.