ಬಾಗಲಕೋಟೆ: 1964ರಲ್ಲಿ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಆರಂಭವಾಗಿ 60 ವರ್ಷಗಳು ಕಳೆದರೂ ಸಂಪೂರ್ಣಗೊಂಡಿಲ್ಲ. ಯೋಜನೆ ಆರಂಭದಿಂದಲೂ ಅಕ್ಕ–ಪಕ್ಕದ ರಾಜ್ಯಗಳು ಕ್ಯಾತೆ ತೆರೆಯುತ್ತಲೇ ಬಂದಿವೆ. ಅವುಗಳನ್ನು ಮೆಟ್ಟಿ ನಿಂತಿದ್ದರೂ, ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಪೂರ್ಣಗೊಂಡಿಲ್ಲ.
ಯೋಜನೆ ಪೂರ್ಣಗೊಳ್ಳದಿರಲು ಆಡಳಿತ ನಡೆಸಿದ ರಾಜ್ಯ ಸರ್ಕಾರಗಳ ಇಚ್ಛಾಶಕ್ತಿ ಕೊರತೆ ಕಾರಣವಾಗಿದೆ. ಅದಕ್ಕೆ ತಕ್ಕನಾಗಿ ಆಗಾಗ ಪಕ್ಕದ ರಾಜ್ಯಗಳು ಕ್ಯಾತೆ ತೆಗೆಯುತ್ತಲೇ ಇರುತ್ತವೆ. ಕೇಂದ್ರ ಸರ್ಕಾರಗಳ ನಿರ್ಲಕ್ಷವೂ ಸೇರಿದೆ.
ಆಲಮಟ್ಟಿ ಜಲಾಶಯದ ಆಲಮಟ್ಟಿ ಜಲಾಶಯದ ಗೇಟನ್ನು ಈಗಿರುವ 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿ, 130 ಟಿಎಂಸಿ ಅಡಿ ನೀರು ಸಂಗ್ರಹಿಸಬೇಕಿದೆ. ಎತ್ತರಿಸಿದರೆ, ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಎದುರಿಸಬೇಕಾಗುತ್ತದೆ. ಆದ್ದರಿಂದ ಎತ್ತರಿಸುವ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ನ್ಯಾಯಮಂಡಳಿ ತೀರ್ಪು ನೀಡಿದ 15 ವರ್ಷಗಳ ನಂತರ ಪತ್ರ ಬರೆದಿದ್ದಾರೆ.
ನ್ಯಾಯಮಂಡಳಿ ನೀರು ಹಂಚಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕೂಲಂಕಷವಾಗಿ ವಾದ, ಪ್ರತಿವಾದಗಳನ್ನು ಆಲಿಸಿಯೇ ತೀರ್ಪು ನೀಡಿದೆ. ಆದರೂ, ಹೊಸ, ಹೊಸದಾಗಿ ಪಕ್ಕದ ರಾಜ್ಯಗಳು ಕ್ಯಾತೆ ತೆಗೆಯುತ್ತಲೇ ಬಂದಿವೆ.
ಪ್ರವಾಹ ಸಾಮಾನ್ಯ: ಲಕ್ಷಾಂತರ ಕ್ಯೂಸೆಕ್ ನೀರು ನದಿಪಾತ್ರದಲ್ಲಿ ಹರಿಯುವುದರಿಂದ ಭಾರೀ ಪ್ರಮಾಣದಲ್ಲಿ ಸತತ ಮಳೆಯಾದಾಗ ಪ್ರವಾಹ ಸಾಮಾನ್ಯವಾಗಿದೆ. ಪ್ರತಿ ವರ್ಷ ಬಾಗಲಕೋಟೆಯ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ. ಜಮಖಂಡಿ, ಬೀಳಗಿ, ಬಾಗಲಕೋಟೆ, ಹುನಗುಂದ ತಾಲ್ಲೂಕಿನ ಹಲವು ಹಳ್ಳಿಗಳು ಪ್ರವಾಹ ಎದುರಿಸುತ್ತವೆ. ಅದಕ್ಕೆ ಕರ್ನಾಟಕವು ಯಾರನ್ನು ದೂರಬೇಕು. ಮಹಾರಾಷ್ಟ್ರ ರಾಜ್ಯ ಅವೈಜ್ಞಾನಿಕವಾಗಿ ನೀರು ಹರಿಸುತ್ತದೆ ಎಂದರೆ ಒಪ್ಪುವರೇ?
ತಪ್ಪಿದ ಲೆಕ್ಕ: ವಿಧಾನಸಭಾ ಚುನಾವಣೆಯ ಮುನ್ನ ಪ್ರಚಾರ ಭಾಷಣದಲ್ಲಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಐದು ವರ್ಷಗಳಲ್ಲಿ ನೀರಾವರಿಗೆ ₹2 ಲಕ್ಷ ಕೋಟಿ ವೆಚ್ಚ ಮಾಡಿ ಆಲಮಟ್ಟಿ ಸೇರಿದಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಈಗ ಕೇಂದ್ರ ನ್ಯಾಯಮಂಡಳಿ ತೀರ್ಪು ಗೆಜೆಟ್‌ನಲ್ಲಿ ಪ್ರಕಟಿಸಿಲ್ಲ ಎಂದು ದೂರುತ್ತಾರೆ. ಈ ವಿಷಯ ಭಾಷಣ ಮಾಡುವ ಮುಂದೆ ಗೊತ್ತಿರಲಿಲ್ಲವೇ ಎಂಬುದು ಜನರ ಪ್ರಶ್ನೆ?
ಅಧಿಕಾರದಲ್ಲಿರುವರಿಂದಲೇ ಗೊಂದಲ
ಬಾಗಲಕೋಟೆ: ಆಲಮಟ್ಟಿ ಎತ್ತರಕ್ಕೆ ಸಂಬಂಧಿಸಿದ ಆಗಾಗ ಸರ್ಕಾರಗಳು ರಾಜಕೀಯ ನಾಯಕರ ಆಡುವ ಮಾತುಗಳೇ ರಾಜ್ಯಕ್ಕೆ ಮುಳುವಾಗುತ್ತಿವೆಯಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. 519.6 ರಿಂದ 524.256 ಮೀಟರ್‌ಗೆ ಎತ್ತರಿಸಲು ನ್ಯಾಯಮಂಡಳಿಯೇ ಒಪ್ಪಿದೆ. ಅದಕ್ಕೆ ಬೇಕಾದ ಹಣಕಾಸು ಹೊಂದಿಸಲಾಗದ ಬಿಜೆಪಿ ಸರ್ಕಾರವು ಎರಡು ಹಂತದಲ್ಲಿ ಭೂಸ್ವಾಧೀನಕ್ಕೆ ಮುಂದಾಗಿತ್ತು. ಕಾಂಗ್ರೆಸ್ ಸರ್ಕಾರವೂ ಅದೇ ರಾಗ ಹಾಡತೊಡಗಿತ್ತು. ಈ ನಡುವೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಈಗ ಕೇವಲ ಒಂದು ಮೀಟರ್ ಮಾತ್ರ ಎತ್ತರಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ನಿರ್ಧಾರಗಳಿಂದ ಎತ್ತರದ ಬಗೆಗೆ ಆಗಾಗ ಗೊಂದಲಗಳು ಏರ್ಪಡುತ್ತಲೇ ಇವೆ. ಭೂಸ್ವಾಧೀನ ಪರಿಹಾರ ಪುನರ್‌ವಸತಿ ಕಾಮಗಾರಿ ಸೇರಿ ₹1 ಲಕ್ಷ ಕೋಟಿ ಅನುದಾನ ಬೇಕಾಗುತ್ತದೆ. ಆದರೆ ಸಂಪನ್ಮೂಲ ಹೊಂದಿಸುವ ಕೆಲಸ ಸರ್ಕಾರಗಳಿಂದ ಆಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.