ADVERTISEMENT

ಒಳಚರಂಡಿ ನಿರ್ವಹಣೆ: ಪ್ರತಿ ಮನೆಗೆ ₹100

ಗೃಹಬಳಕೆಯ ಪ್ರತಿ ಸಾವಿರ ಲೀಟರ್‌ಗೆ ₹ 9.18, ವಾಣಿಜ್ಯಕ್ಕೆ ₹ 36.70

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 14:30 IST
Last Updated 6 ಜೂನ್ 2025, 14:30 IST
ಬಾಗಲಕೋಟೆ ನಗರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯರಾದ ಸ್ಮಿತಾ ಪವಾರ್, ರೇಖಾ ಕಲಬುರ್ಗಿ ಮಾತನಾಡಿದರು
ಬಾಗಲಕೋಟೆ ನಗರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯರಾದ ಸ್ಮಿತಾ ಪವಾರ್, ರೇಖಾ ಕಲಬುರ್ಗಿ ಮಾತನಾಡಿದರು   

ಬಾಗಲಕೋಟೆ: ನಗರಸಭೆ ವ್ಯಾಪ್ತಿ ಪ್ರದೇಶಗಳ ಒಳಚರಂಡಿ ನಿರ್ವಹಣೆಗೆ ಪ್ರತಿ ಮನೆಯಿಂದ ತಿಂಗಳಿಗೆ ₹100 ಶುಲ್ಕ ವಸೂಲಿ ಮಾಡಲು ಶುಕ್ರವಾರ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ನಿರ್ಧರಿಸಲಾಯಿತು.

ಬಾಗಲಕೋಟೆ, ವಿದ್ಯಾಗಿರಿ, ರೂಪಲ್ಯಾಂಡ್, ತೆಗ್ಗಿ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳ ಒಳಚರಂಡಿ ನಿರ್ವಹಣೆಯನ್ನು ಬಾಗಲಕೋಟೆ ಪಟ್ಟಣ ನಗರಾಭಿವೃದ್ಧಿ ಇಲಾಖೆ ಮಾಡುತ್ತಿತ್ತು. ಈಗ ಅದನ್ನು ನಗರಸಭೆಗೆ ಹಸ್ತಾಂತರಿಸಲಾಗಿದೆ. ನಿರ್ವಹಣೆಗೆ ಶುಲ್ಕ ವಿಧಿಸಲು ನಗರಸಭೆ ತೀರ್ಮಾನಿಸಿದೆ.

ಏಪ್ರಿಲ್‌ನಿಂದಲೇ ನಗರಸಭೆಯು ನಿರ್ವಹಣೆಯನ್ನು ವಹಿಸಿಕೊಂಡಿದ್ದು, ಆ ತಿಂಗಳಿನಿಂದಲೇ ಪ್ರತಿ ತಿಂಗಳಿಗೆ ₹100 ನಂತೆ ವಸೂಲಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಅಮೃತ ಯೋಜನೆಯಡಿ ನಿರ್ವಹಿಸಿರುವ ನೀರು ಸರಬರಾಜು ನಳಗಳಿಗೆ ಈಗಾಗಲೇ ಮೀಟರ್ ಅಳವಡಿಸಲಾಗಿದ್ದು, ಅವುಗಳಿಗೂ ಪ್ರತಿ ಲೀಟರ್ ಲೆಕ್ಕದಲ್ಲಿ ದರ ನಿಗದಿ ಮಾಡಲಾಗಿದೆ. ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದ್ದು, ಆ ದರಗಳಿಗೂ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಗೃಹ ಬಳಕೆಯ ಪ್ರತಿ ಸಾವಿರ ಲೀಟರ್‌ಗೆ ₹ 9.18 ನಿಗದಿ ಮಾಡಲಾಗಿದ್ದು, 8 ಸಾವಿರ ಲೀಟರ್‌ಗೆ ₹ 73.44 ಆಗುತ್ತದೆ. ನಂತರದಲ್ಲಿ ಬಳಕೆ ಹೆಚ್ಚಾದಂತೆ ಮೂಲ ದರದಲ್ಲಿಯೂ ಬದಲಾವಣೆಯಾಗಲಿದೆ. ವಾಣಿಜ್ಯ ಬಳಕೆಯ ಪ್ರತಿ ಸಾವಿರ ಲೀಟರ್‌ಗೆ ₹ 36.70 ನಿಗದಿ ಮಾಡಲಾಗಿದ್ದು, ಅಲ್ಲಿಯೂ ಬಳಕೆಯ ಪ್ರಮಾಣದ ಮೇಲೆ ದರದಲ್ಲಿ ಬದಲಾವಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರತಿ ಮನೆಯಿಂದ ಇಲ್ಲಿಯವರೆಗೆ ಎಷ್ಟೇ ನೀರು ಸರಬರಾಜು ಮಾಡಲಿ ಪ್ರತಿ ತಿಂಗಳಿಗೆ ₹ 200 ಶುಲ್ಕ ವಿಧಿಸಲಾಗುತ್ತಿತ್ತು. ಇನ್ನು ಮೇಲೆ ಲೀಟರ್ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ.

ಕೆಲವೇ ವಾರ್ಡ್‌ಗಳಿಗೆ ಅನುದಾನ ನಿಗದಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಶ್ರೀನಿವಾಸ ಸಜ್ಜನ, ರದ್ದು ಪಡಿಸುವಂತೆ ತಿಳಿಸಿದರೂ ಏಕೆ ರದ್ದು ಪಡಿಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಹಲವು ಸದಸ್ಯರು ದನಿಗೂಡಿಸಿದರು

ಪೌರಾಯುಕ್ತರ ವಿರುದ್ಧ ಅಸಮಾಧಾನ

ಬಾಗಲಕೋಟೆ: ಪೌರಾಯುಕ್ತರು ಸಮಸ್ಯೆ ಹೇಳಲು ಬಂದವರಿಗೆ ಎದ್ದು ಹೋಗಿ ಎಂದರು. ಹಾಗೆಯೇ ಪಹಲ್ಗಾಮ್‌ನಲ್ಲಿ ಉಗ್ರರು ಗುಂಡು ಹೊಡೆದಂತೆ ಹೊಡೆಯಬೇಕು ಎಂದಿದ್ದಾರೆ ಎಂದು ಸಾಮಾನ್ಯಸಭೆಯಲ್ಲಿ ಕೆಲ ಸದಸ್ಯರು ಆರೋಪಿಸಿದರು. ಸದಸ್ಯರಾದ ಸ್ಮಿತಾ ಪವಾರ್ ಮಾತನಾಡಿ ‘ಜನಪ್ರತಿನಿಧಿಗಳಿಗೆ ಗೌರವ ನೀಡುವುದಿಲ್ಲ. ಜನಪ್ರತಿನಿಧಿಗಳಾಗಿ ವಾರ್ಡ್‌ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬರುತ್ತೇವೆ. ಜನರ ಮುಂದೆ ನೀವು ಅಗೌರವದಿಂದ ನೋಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು. ಪೌರಾಯುಕ್ತ ವಾಸಣ್ಣ ಮಾತನಾಡಿ ಹಿಂದಿನ ಯಾವುದೇ ಘಟನೆಗಳನ್ನು ಕೆದಕಿ ಸುಳ್ಳು ಆರೋಪ ಮಾಡುತ್ತಿದ್ದೀರಿ. ಟೆಂಡರ್ ರದ್ದು ಮಾಡದಿರುವುದಕ್ಕೆ ಹೇಳುತ್ತಿದ್ದೀರಿ ಎಂದು ಹೇಳಿದರು. ಆಗ ಸದಸ್ಯರಾದ ಶಶಿಕಲಾ ಮಜ್ಜಗಿ ರೇಖಾ ಕಲಬುರ್ಗಿ ಅವರೂ ‘ಸದಸ್ಯರಿಗೆ ಎದ್ದು ಹೋಗುವಂತೆ ಹೇಳಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಅಧ್ಯಕ್ಷೆ ಉಪಾಧ್ಯಕ್ಷೆ ಮೌನವಾಗಿದ್ದರು. ಸದಸ್ಯರ ಪರವಾಗಿ ಮಾತನಾಡದ್ದಕ್ಕೆ ಅವರ ವಿರುದ್ಧವೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.  ಮಧ್ಯಪ್ರವೇಶಿಸಿದ ಬಸವರಾಜ ಅವರಾದಿ ‘ಅಧ್ಯಕ್ಷರೇ ಸದಸ್ಯರು ಹಾಗೂ ಪೌರಾಯುಕ್ತರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿ’ ಎಂದರು. ಇದಕ್ಕೆ ಕೆಲ ಸದಸ್ಯರು ಸಭೆಯಲ್ಲಿಯೇ ಚರ್ಚೆಯಾಗಲಿ ಎಂದು ಆಗ್ರಹಿಸಿದರು. ‘ಬಾಗಲಕೋಟೆ ಜನರೇ ಹೀಗೆ ಸದಸ್ಯರು ಹೀಗೆ ಇದ್ದೇವೆ. ಕೆಲಸ ಮಾಡುವುದಿದ್ದರೆ ಇರಿ ಇಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ’ ಎಂದು ಸ್ಮಿತಾ ಪವಾರ್ ಒತ್ತಾಯಿಸಿದರು. ಇನ್ನು ಮುಂದೆ ಹೀಗಾಗದಂತೆ ಸದಸ್ಯರೊಂದಿಗೆ ಸರಿಯಾಗಿ ನಡೆದುಕೊಳ್ಳಿ ಎಂದು ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.