ADVERTISEMENT

ವೃದ್ಧನಿಗೆ ಸಹೋದರನಿಂದ ಸೋಂಕು ಶಂಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 15:35 IST
Last Updated 6 ಏಪ್ರಿಲ್ 2020, 15:35 IST

ಬಾಗಲಕೋಟೆ:ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಏಪ್ರಿಲ್ 3ರಂದು ಮೃತಪಟ್ಟ 75 ವರ್ಷದ ವೃದ್ಧನಿಗೆಕೋವಿಡ್–19 ಸೋಂಕು ಸ್ವತಃ ಅವರ ಸಹೋದರನಿಂದ ತಗುಲಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃದ್ಧನ ಸಹೋದರ ಮಾರ್ಚ್ 15ರಂದು ಕಲಬುರ್ಗಿಗೆ ವ್ಯವಹಾರದ ನಿಮಿತ್ತ ತೆರಳಿದ್ದರು. ಅಲ್ಲಿನ ಸೋಂಕುಪೀಡಿತ ಪ್ರದೇಶವಾದ ಮೊಮಿನ್‌ಪುರ, ಗಂಜ್ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಓಡಾಡಿದ್ದರು ಎಂದರು.

ಕೋವಿಡ್–19 ಸೋಂಕಿನಿಂದ ಕಲಬುರ್ಗಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಮನೆ ಪಕ್ಕದ ಹೋಟೆಲ್‌ನಲ್ಲಿಯೇ ಊಟ ಮಾಡಿದ್ದರು. ಅಂದು ಸಂಜೆ ಮಾರ್ಕೆಟ್‌ನಲ್ಲಿ ಸುತ್ತಾಡಿದ್ದರು. ಮಾರ್ಚ್ 16ರಂದು ಬಸ್‌ನಲ್ಲಿ ಬಾಗಲಕೋಟೆಗೆ ಮರಳಿದ್ದರು. ಕಲಬುರ್ಗಿ ಪ್ರವಾಸದಲ್ಲಿಯೇ ಅವರಿಗೆ ಸೋಂಕು ತಗುಲಿರಬಹುದು. ಈಗ ಅವರಿಗೆ ಸೋಂಕು ದೃಢಪಟ್ಟಿದೆ. ಆದರೂ ಬೇರೆ ಬೇರೆ ಸಾಧ್ಯತೆಗಳ ಬಗ್ಗೆಯೂ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ADVERTISEMENT

ಮಾರ್ಚ್ 24ರಂದು ಗಂಟಲು ನೋವು, ಜ್ವರ ಬಂದಿದ್ದ ಕಾರಣ ಬೇರೆ ಬೇರೆ ಕಡೆ ಚಿಕಿತ್ಸೆ ಪಡೆದಿದ್ದ ವೃದ್ಧ ನಂತರ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಕೋವಿಡ್–19 ಗುಣಲಕ್ಷಣದ ಕಾರಣ ಅವರ ಗಂಟಲು ದ್ರವ, ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.